ಬಿಹಾರ | ಮತದಾನದ ದಿನ ಮುದ್ರಣ ಮಧ್ಯಮಗಳಲ್ಲಿ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ : ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ (Photo credit: PTI)
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣಾ ದಿನ ಮತ್ತು ಅದರ ಮುನ್ನಾದಿನ ಮುದ್ರಣ ಮಾಧ್ಯಮಗಳ ಜಾಹೀರಾತುಗಳಿಗೆ ಪೂರ್ವನುಮತಿ ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆಯನ್ನು ಹೊರಡಿಸಿದೆ.
ಚುನಾವಣಾ ಆಯೋಗದ ಉಪ ನಿರ್ದೇಶಕ ಪಿ ಪವನ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಚುನಾವಣಾ ಆಯೋಗ 2025ರ ಬಿಹಾರ ವಿಧಾನಸಭಾ ಚುನಾವಣೆ ಮತ್ತು 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ 6 ಮತ್ತು ನವೆಂಬರ್ 11ರಂದು ಮತದಾನದ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಚುನಾವಣಾ ದಿನ ಮತ್ತು ಅದರ ಮುನ್ನಾದಿನ ಮುದ್ರಣ ಮಾಧ್ಯಮಗಳ ಜಾಹೀರಾತುಗಳಿಗೆ ಪೂರ್ವನುಮತಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
“ನ್ಯಾಯಯುತ ಪ್ರಚಾರದ ದೃಷ್ಟಿಯಿಂದ ರಾಜ್ಯ ಅಥವಾ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ(MCMC)ಯಿಂದ ಪೂರ್ವ ಪ್ರಮಾಣೀಕರಣ ಪಡೆಯದೆ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘಟನೆ ಅಥವಾ ವ್ಯಕ್ತಿ ಮತದಾನದ ದಿನ ಮತ್ತು ಹಿಂದಿನ ದಿನದಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತನ್ನು ಪ್ರಕಟಿಸಬಾರದು” ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.