ತೆಲಂಗಾಣ | ಬಸ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ಗೆ ಗೃಹಬಂಧನ
Photo | timesofindia
ಹೈದರಾಬಾದ್: ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆಯನ್ನು ವಿರೋಧಿಸಿ ಬಿಆರ್‌ಎಸ್ ಘೋಷಿಸಿದ್ದ “ಬಸ್ ಭವನ” ಪ್ರತಿಭಟನಾ ಕಾರ್ಯಕ್ರಮಕ್ಕೆ ಮುನ್ನ, ಹೈದರಾಬಾದ್ ಪೊಲೀಸರು ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರಿಗೆ ಗುರುವಾರ ಗೃಹಬಂಧನ ವಿಧಿಸಿದ್ದಾರೆ.
ರಾಮರಾವ್ ಅವರ ನಿವಾಸದ ಹೊರಭಾಗದಲ್ಲಿ ಭಾರೀ ಸಂಖ್ಯೆಯ ಪೊಲೀಸ್ ರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ.
ಇತ್ತೀಚೆಗೆ ಬಸ್ ದರ ಏರಿಕೆಯನ್ನು ತೀವ್ರವಾಗಿ ಟೀಕಿಸಿದ ರಾಮರಾವ್, ಪ್ರತಿ ಟಿಕೆಟ್‌ಗೆ ರೂ.10 ಹೆಚ್ಚುವರಿ ಶುಲ್ಕ ವಿಧಿಸಿದ ನಿರ್ಧಾರವನ್ನು ವಿರೋಧಿಸಿದ್ದರು. ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರವು ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರ ಮೇಲೆ ಅನಗತ್ಯ ಭಾರವನ್ನು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದರು.
“ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಸಾರಿಗೆ ವೆಚ್ಚಗಳ ಹೆಚ್ಚಳವು ಬಡ ಕುಟುಂಬಗಳನ್ನು ಆರ್ಥಿಕ ಸಂಕಷ್ಟದ ಗಂಭೀರ ಸ್ಥಿತಿಗೆ ತಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಡವರು ಹೇಗೆ ಬದುಕಬೇಕು?” ಎಂದು ರಾಮರಾವ್ ಪ್ರಶ್ನಿಸಿದ್ದರು. ಸರಕಾರ ತಕ್ಷಣ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದ್ದರು.
ಬಿಆರ್‌ಎಸ್ ಅಂದಾಜಿನ ಪ್ರಕಾರ, ಬಸ್ ದರ ಏರಿಕೆಯ ಪರಿಣಾಮವಾಗಿ ಪ್ರತಿ ಪ್ರಯಾಣಿಕನಿಗೂ ತಿಂಗಳಿಗೆ ಸರಾಸರಿ ರೂ.500 ಹೆಚ್ಚುವರಿ ವೆಚ್ಚ ಉಂಟಾಗಲಿದೆ. ಇದರಿಂದ ದಿನನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವವರ ದೈನಂದಿನ ಜೀವನದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ.