×
Ad

Pune | ಸುದ್ದಿ ವಾಹಿನಿ ಕಚೇರಿ ಹೊರಗೆ ವಾಗ್ವಾದ: ಕಾಂಗ್ರೆಸ್ ವಕ್ತಾರರಿಗೆ ಹಿಂದುತ್ವ ಕಾರ್ಯಕರ್ತರಿಂದ ಹಲ್ಲೆ ಆರೋಪ

Update: 2026-02-25 15:49 IST

Screengrab : X 

ಪುಣೆ: ಸುದ್ದಿ ವಾಹಿನಿ ಕಚೇರಿಯ ಹೊರಗೆ ನಡೆದ ವಾಗ್ವಾದದ ನಂತರ ಕಾಂಗ್ರೆಸ್ ಪಕ್ಷದ ವಕ್ತಾರರ ಮೇಲೆ ಹಿಂದುತ್ವ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಸೋಮವಾರ ಸಂಜೆ 5.30ರ ಸುಮಾರಿಗೆ ಪುಣೆಯ ಪುಢಾರಿ ನ್ಯೂಸ್ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಅದರ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ವಕ್ತಾರ ಹನುಮಂತ್ ಪವಾರ್ ಹಾಗೂ ಹಿಂದುತ್ವ ಕಾರ್ಯಕರ್ತ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ತುಷಾರ್ ದಾಮ್ಗುಡೆ ವಿವಿಧ ಸಮಕಾಲೀನ ವಿಷಯಗಳ ಕುರಿತು ಹಲವು ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಸೋಮವಾರ ಇಬ್ಬರೂ ನ್ಯೂಸ್ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಕಚೇರಿಯಿಂದ ಹೊರಬಂದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ದಾಮ್ಗುಡೆ ಪವಾರ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ದಾಮ್ಗುಡೆ ಅವರೊಂದಿಗೆ ಇದ್ದ ಕೆಲವರು ಕೂಡ ಕಾಂಗ್ರೆಸ್ ವಕ್ತಾರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ದಾಮ್ಗುಡೆ ತಮ್ಮನ್ನು ಪ್ರಶ್ನಿಸಿ, ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪವಾರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ದಾಮ್ಗುಡೆ ಹಾಗೂ ಇತರರ ವಿರುದ್ಧ ಪವಾರ್ ಸ್ವರ್ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಷೇಧಿತ ಸಿಪಿಐ–ಮಾವೋವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ 16 ಜನರನ್ನು ಬಂಧಿಸಲಾಗಿದ್ದ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ದಾಮ್ಗುಡೆ ದೂರುದಾರರಾಗಿದ್ದರು ಎಂಬುದು ಗಮನಾರ್ಹ.

ಇನ್ನೊಂದೆಡೆ, ಪವಾರ್ ಮಾಡಿದ ಆರೋಪಗಳನ್ನು ದಾಮ್ಗುಡೆ ತಳ್ಳಿಹಾಕಿದ್ದಾರೆ. ಟಿಪ್ಪು ಸುಲ್ತಾನ್ ಕುರಿತು ಇತ್ತೀಚೆಗೆ ನಡೆದ ಚರ್ಚೆಯ ವೇಳೆ ಪವಾರ್ ತಮ್ಮ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಪದಗಳನ್ನು ಬಳಕೆ ಮಾಡಿದ್ದರು ಎಂದು ಅವರು ಹೇಳಿದ್ದಾರೆ. ನ್ಯೂಸ್ ಕಚೇರಿ ಹೊರಗೆ ಕೂಡ ಪವಾರ್ ಮತ್ತೆ ನಿಂದನೆ ಮಾಡಿದ್ದು, ನಕ್ಸಲರ ವಿರುದ್ಧ ನಿಲುವು ತೆಗೆದುಕೊಂಡಿದ್ದಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ದಾಮ್ಗುಡೆ ಆರೋಪಿಸಿದ್ದಾರೆ. ಪವಾರ್ ವಿರುದ್ಧವೂ ಪೊಲೀಸ್ ದೂರು ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಅಪರಾಧ ದಾಖಲಿಸುವ ಪ್ರಕ್ರಿಯೆ ಮುಂದುವರೆದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News