×
Ad

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಕೇಂದ್ರ ಸರಕಾರವು ದೇಶದ ಹಾದಿ ತಪ್ಪಿಸುತ್ತಿದೆ: ಕಾಂಗ್ರೆಸ್ ಆರೋಪ

Update: 2025-06-29 20:54 IST

ಹೊಸದಿಲ್ಲಿ: ಭಾರತೀಯ ವಾಯು ಪಡೆ ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ಅವುಗಳ ರಕ್ಷಣಾ ಸ್ವತ್ತುಗಳ ಮೇಲೆ ದಾಳಿ ನಡೆಸಬಾರದು ಎಂದು ರಾಜಕೀಯ ನಾಯಕತ್ವದಿಂದ ಒತ್ತಡಕ್ಕೆ ಒಳಗಾಗಿದ್ದರಿಂದ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಆರಂಭಿಕ ಹಂತವು ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು ಎಂದು ಇಂಡೊನೇಶ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯಾದ ಕ್ಯಾ. ಶಿವ್ ಕುಮಾರ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೀಡಾಗಿದೆ.

ಸೇನಾಧಿಕಾರಿಯ ಈ ಹೇಳಿಕೆಯನ್ನು ಉಲ್ಲೇಖಿಸಿರುವ ವಿಪಕ್ಷ ಕಾಂಗ್ರೆಸ್, ಬಿಜೆಪಿ ಸರಕಾರ ದೇಶವನ್ನು ದಾರಿ ತಪ್ಪಿಸುತ್ತಿದೆ ಎಂದು ಟೀಕಿಸಿದೆ.

ಜೂನ್ 10ರಂದು ಇಂಡೋನೇಶ್ಯಾ ವಿಶ್ವವಿದ್ಯಾಲಯವೊಂದರಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಕ್ಯಾ. ಶಿವ್ ಕುಮಾರ್, “ಭಾರತ ಕೆಲವು ವಿಮಾನಗಳ ನಷ್ಟ ಅನುಭವಿಸಿತಾದರೂ, ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ವಾಯು ರಕ್ಷಣೆಯ ಮೇಲೆ ದಾಳಿ ನಡೆಸಬಾರದು ಎಂಬ ರಾಜಕೀಯ ಒತ್ತಡದಿಂದಾಗಿ ಆ ನಷ್ಟವನ್ನು ಅನುಭವಿಸಬೇಕಾಯಿತು” ಎಂದು ಹೇಳಿದ್ದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮೊದಲಿಗೆ ಡಿಫೆನ್ಸ್ ಸ್ಟ್ಯಾಫ್ ಮುಖ್ಯಸ್ಥರು ಸಿಂಗಾಪುರದಲ್ಲಿ ಮುಖ್ಯ ವಿಚಾರವೊಂದನ್ನು ಬಹಿರಂಗಗೊಳಿಸಿದ್ದರು. ನಂತರ, ಇಂಡೋನೇಶ್ಯಾದಲ್ಲಿ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಅವರನ್ನು ಹಿಂಬಾಲಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಆದರೆ, ಪ್ರಧಾನಿಯೇಕೆ ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸಲು ಹಾಗೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ? ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂಬ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಯಿತು?” ಎಂದೂ ಅವರು ಪ್ರಶ್ನಿಸಿದ್ದಾರೆ.

ತಮ್ಮ ಹೇಳಿಕೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಇಂಡೊನೇಶ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ, ‘ಮಾಧ್ಯಮ ವರದಿಗಳು ರಕ್ಷಣಾ ಅಧಿಕಾರಿಯ ಮಾತುಗಳನ್ನು ವ್ಯಾಪ್ತಿ ಮೀರಿ ಅರ್ಥೈಸಿವೆ’ ಎಂದು ತಿಳಿಸಿದೆ.

“ವಿಚಾರ ಸಂಕಿರಣವೊಂದರಲ್ಲಿ ರಕ್ಷಣಾ ಅಧಿಕಾರಿಯೊಬ್ಬರು ನೀಡಿದ ಉಪನ್ಯಾಸದ ಕುರಿತು ಮಾಧ್ಯಮಗಳ ವರದಿಯನ್ನು ನಾವು ನೋಡಿದ್ದೇವೆ. ಅವರ ಮಾತುಗಳನ್ನು ವ್ಯಾಪ್ತಿ ಮೀರಿ ಅರ್ಥೈಸಲಾಗಿದೆ ಹಾಗೂ ಭಾಷಣಕಾರರು ತಮ್ಮ ಉಪನ್ಯಾಸದ ವೇಳೆ ಹೊಂದಿದ್ದ ಉದ್ದೇಶ ಹಾಗೂ ಪ್ರಸ್ತುತಿಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ” ಎಂದು ಅದು ಸ್ಪಷ್ಟನೆ ನೀಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News