×
Ad

ವೈಯುಕ್ತಿಕ ತೇಜೋವಧೆ ಮಾಡುವುದು ಆರೆಸ್ಸೆಸ್ ನ ವಾಗ್ದಾಳಿ ವಿಧಾನ: ರಾಹುಲ್ ಗಾಂಧಿ

Update: 2025-08-26 20:23 IST

 ರಾಹುಲ್ ಗಾಂಧಿ |PTI  

ಅರರಿಯಾ, ಆ. 26: ಯಾರ ಮೇಲಾದರೂ ವಾಗ್ದಾಳಿ ನಡೆಸಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ವೈಯುಕ್ತಿಕ ತೇಜೋವಧೆ ಮಾಡುತ್ತದೆ. ಅದು ಮಹಾತ್ಮಾ ಗಾಂಧಿ ಅವರಿಗೆ ಕೂಡ ಇದೇ ರೀತಿ ಮಾಡಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಬಿಹಾರದಲ್ಲಿ ಮಹಾಘಟಬಂಧನದ ಮಿತ್ರ ಪಕ್ಷಗಳ ನಾಯಕರೊಂದಿಗಿನ ಸಂವಹನದ ಸಂದರ್ಭ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಅನಂತರ ಈ ಸಂವಹನದ ವೀಡಿಯೊವನ್ನು ತನ್ನ ‘ಎಕ್ಸ್’ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ರಾಹುಲ್ ಗಾಂಧಿ ಅವರು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ವಿಕಾಸ್‌ ಶೀಲ ಇನ್ಸಾನ್ ಪಕ್ಷ (ವಿಐಪಿ)ದ ವರಿಷ್ಠ ಮುಕೇಶ್ ಸಹಾನಿ, ಮಹಾತ್ಮಾ ಗಾಂಧಿ ಅವರು ಮರಿ ಮೊಮ್ಮಗ ತುಷಾರ್ ಗಾಂಧಿ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಕುಮಾರ್ ಹಾಗೂ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಅವರೊಂದಿಗೆ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿರುವುದು ಕಂಡು ಬಂದಿದೆ.

‘‘ವೈಯುಕ್ತಿಕ ತೇಜೋವಧೆ ಮಾಡುವುದು ಆರೆಸ್ಸೆಸ್ ನ ವಾಗ್ದಾಳಿ ವಿಧಾನ. ಅವರು ಗಾಂಧೀಜಿ ಅವರ ವಿರುದ್ಧ ಕೂಡ ಇದೇ ಅಸ್ತ್ರವನ್ನು ಬಳಸಿದರು. ಆರೆಸ್ಸೆಸ್ ಗಾಂಧೀಜಿ ಅವರನ್ನು ಎಷ್ಟು ತೇಜೋವಧೆ ಮಾಡಿದೆ, ನಿಂದಿಸಿದೆ ಎಂದು ಜನರಿಗೆ ತಿಳಿದಿಲ್ಲ, ನೆನಪಿಲ್ಲ. ಗಾಂಧೀಜಿ ಅವರ ಬಗ್ಗೆ ಎಷ್ಟೆಲ್ಲಾ ಸುಳ್ಳು ಹೇಳಿದರು. ಅದು ಆರೆಸ್ಸೆಸ್ ನ ಶೈಲಿ’’ ಎಂದು ರಾಹುಲ್ ಗಾಂಧಿ ಹೇಳಿದರು.

ಹಿಂದೆ ರಾಜಕೀಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಆದರೆ, ವೈಯುಕ್ತಿವಾಗಿ ನಿಂದಿಸುತ್ತಿರಲಿಲ್ಲ ಎಂದು ತುಷಾರ್ ಗಾಂಧಿ ಹೇಳಿದರು. ಆದರೆ, ವೈಯುಕ್ತಿಕ ತೇಜೋವಧೆ ಕುರಿತ ಒಲವು 2014ರ ನಂತರ ತೀವ್ರಗೊಂಡಿತು ಎಂದು ತೇಜಸ್ವಿ ಯಾದವ್ ತಿಳಿಸಿದರು.

‘‘ಅವರು ಕರ್ಪೂರಿ ಠಾಕೂರ್ ಜಿ ಅವರನ್ನು ನಿಂದಿಸಿದರು. ಅನಂತರ ಭಾರತ ರತ್ನ ನೀಡಿದರು’’ ಎಂದು ಯಾದವ್ ಹೇಳಿದರು.

‘‘ಮತಗಳ್ಳತನ’’ದ ಆರೋಪದ ಕುರಿತು ಮಾತನಾಡಿದ ತೇಜಸ್ವಿ ಯಾದವ್, ತಮ್ಮ ಮತಗಳು ಚುನಾವಣಾ ಫಲಿತಾಂಶದಲ್ಲಿ ಪ್ರತಿಬಿಂಬಿಸುತ್ತಿಲ್ಲ ಎಂದು ಜನರು ಭಾವಿಸುತ್ತಿದ್ದಾರೆ. ಆದರೆ, ಈಗ ಬೆಳಕಿಗೆ ಬಂದ ಪುರಾವೆಗಳು ಚುನಾವಣಾ ಅಕ್ರಮದತ್ತ ಬೆರಳು ತೋರಿಸುತ್ತಿದೆ. ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಿ ಮೋದಿ ಅವರು ಏನನ್ನೇ ಹೇಳಲಿ, ಅದನ್ನು ಚುನಾವಣಾ ಆಯೋಗ ಅನುಸರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News