'ಪ್ರಧಾನಿಗಿಂತ ರಾಹುಲ್ ಗಾಂಧಿ ಹೆಚ್ಚು ಮತಗಳನ್ನು ಪಡೆದಿದ್ದಾರೆ': ಸಂಸತ್ತಿನಲ್ಲಿ ಬಿಜೆಪಿ ಸಲ್ಲಿಸಿದ ನೋಟಿಸ್ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ
ನಿಶಿಕಾಂತ್ ದುಬೆ , ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಸಂಸತ್‌ನಿಂದ ಉಚ್ಚಾಟಿಸಬೇಕು ಹಾಗೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಜೀವನಪರ್ಯಂತ ನಿಷೇಧಿಸಬೇಕು ಎಂದು ಕೋರುವ ನಿರ್ಣಯವನ್ನು ಮಂಡಿಸಲು ಅನುಮತಿ ಕೋರಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪಕ್ಷವು ಯಾವುದೇ ನಿರ್ಣಯವನ್ನು ಎದುರಿಸಲು ಸಿದ್ಧವಾಗಿದೆ ಮತ್ತು ಸಂಸತ್ತಿನಲ್ಲಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ನಾವು ಹಕ್ಕುಚ್ಯುತಿ ನಿರ್ಣಯವನ್ನು ಎದುರಿಸಲು ಸಿದ್ಧರಿದ್ದೇವೆ. ಕಳೆದ ಬಾರಿ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದರು. ಆದರೆ, ಅವರು ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ ಎಂದು ಕೆ.ಸಿ. ವೇಣುಗೋಪಾಲ್ ಹೇಳಿದರು.
ವಿರೋಧ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದಂತೆ ಸರಕಾರ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದೆ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ನಾವು ನಿರಂತರವಾಗಿ ದೂರು ನೀಡುತ್ತಿದ್ದೇವೆ. ಸರಕಾರದ ಒತ್ತಡದಿಂದ ರಾಹುಲ್ ಗಾಂಧಿಯವರು ಹೇಳಿದ್ದ ಮಾತುಗಳನ್ನು ದಾಖಲೆಗಳಿಂದ ಅಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಇದು ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ. ನಾನು ಒಂದು ಪ್ರಮುಖ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ. ಅದರಲ್ಲಿ ರಾಹುಲ್ ಗಾಂಧಿ ಅವರು ಸೊರೋಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್, ಯುಎಸ್ಎಐಡಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪಗಳನ್ನು ಉಲ್ಲೇಖಿಸಿದ್ದೇನೆ. ರಾಹುಲ್ ಗಾಂಧಿ ಅವರು ಥೈಲ್ಯಾಂಡ್, ಕಂಬೋಡಿಯಾ, ವಿಯೆಟ್ನಾಂ ಹಾಗೂ ಅಮೆರಿಕಾ ಮುಂತಾದ ದೇಶಗಳಿಗೆ ಭೇಟಿ ನೀಡಿರುವುದು ಮತ್ತು ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅವರ ಸಂಸದೀಯ ಸದಸ್ಯತ್ವವನ್ನು ರದ್ದುಗೊಳಿಸಬೇಕು ಹಾಗೂ ಜೀವಿತಾವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಾನು ಆಗ್ರಹಿಸಿದ್ದೇನೆ ಎಂದು ಹೇಳಿದ್ದರು.