"ಅವರಿಗೆ ಬ್ಯಾಟ್ ಹಿಡಿಯುವುದು ಹೇಗೆಂದು ಗೊತ್ತಿಲ್ಲ” : ಐಸಿಸಿ ಅಧ್ಯಕ್ಷರಾಗಲು ಜಯ್ ಶಾಗೆ ಇರುವ ನೈತಿಕತೆಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ / ಜಯ್ ಶಾ (Photo: PTI)
ಹೊಸದಿಲ್ಲಿ : “ಅವರಿಗೆ ಕ್ರಿಕೆಟ್ ಬ್ಯಾಟ್ ಹಿಡಿಯುವುದು ಹೇಗೆಂದು ಗೊತ್ತಿಲ್ಲ, ಆದರೆ ಅವರೇ ಕ್ರೀಡೆಯನ್ನು ನಡೆಸುತ್ತಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಐಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಿಹಾರದ ಭಾಗಲ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನೀವು ಅದಾನಿ, ಅಂಬಾನಿ ಅಥವಾ ಅಮಿತ್ ಶಾ ಅವರ ಮಗನಾಗಿದ್ದರೆ ಮಾತ್ರ ದೊಡ್ಡ ಕನಸು ಕಾಣಲು ಸಾಧ್ಯ. ಅಮಿತ್ ಶಾ ಅವರ ಮಗ ಜಯ್ ಶಾಗೆ ಬ್ಯಾಟ್ ಹಿಡಿಯುವುದು ಹೇಗೆಂದು ತಿಳಿದಿಲ್ಲ, ಮತ್ತೆ ರನ್ ಗಳಿಸುವುದು ದೂರದ ಮಾತು. ಆದರೆ ಅವರು ಕ್ರಿಕೆಟ್ ಮುಖ್ಯಸ್ಥರು. ಅವರು ಹಣವಿರುವ ಕಾರಣದಿಂದ ಎಲ್ಲವನ್ನೂ ನಿಯಂತ್ರಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಎನ್‌ಡಿಎ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್ ಗಾಂಧಿ, ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳನ್ನು ನಾಶಮಾಡಲು ಮೋದಿ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತಂದಿದೆ ಎಂದು ಹೇಳಿದರು. ಎನ್‌ಡಿಎ ಸರಕಾರ ಬಡವರ ಭೂಮಿಯನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿಗಳಂತಹ ಕೈಗಾರಿಕೋದ್ಯಮಿಗಳಿಗೆ ಉಡುಗೊರೆಯಾಗಿ ನೀಡುತ್ತಿದೆ ಎಂದು ಆರೋಪಿಸಿದರು.