ರಾಜಸ್ಥಾನ | ತಾಯಿಯನ್ನು ಥಳಿಸಿ ಹತ್ಯೆ ಮಾಡಿದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಜೈಪುರ,ಸೆ.17: ಖಾಲಿಯಾಗಿದ್ದ ಗ್ಯಾಸ್ ಸಿಲಿಂಡರ್‌ನ್ನು ಬದಲಿಸುವಂತೆ ಹೇಳಿದ್ದಕ್ಕಾಗಿ ಕೋಪಗೊಂಡ ಯುವಕ ತನ್ನ ಹೆತ್ತ ತಾಯಿಯನ್ನೇ ಕ್ರೂರವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆರೋಪಿ ನವೀನ್ ತನ್ನ ತಾಯಿ ಸಂತೋಷ್ ದೇವಿಯನ್ನು ಕೋಲಿನಿಂದ ಥಳಿಸುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಆತನ ತಂದೆ ಮತ್ತು ಸೋದರಿ ಮಧ್ಯ ಪ್ರವೇಶಿಸಲು ಯತ್ನಿಸಿದ್ದರೂ ನವೀನ್ ತಾಯಿಯನ್ನು ಥಳಿಸುವುದನ್ನು ಮುಂದುವರಿಸಿದ್ದ.
‘ಆತ ಓರ್ವ ಕ್ರಿಮಿನಲ್ ಎನ್ನುವುದು ನನಗೆ 2016ರಲ್ಲಿಯೇ ಗೊತ್ತಾಗಿತ್ತು. ಆಗ ನೀವೆಲ್ಲ ನನ್ನನ್ನು ಹುಚ್ಚಿ ಎಂದು ಕರೆದಿದ್ದೀರಿ’ ಎಂದು ಸೋದರಿ ಹೇಳಿದ್ದನ್ನು ವೀಡಿಯೊದಲ್ಲಿ ಕೇಳಬಹುದು.
ಪೊಲೀಸರು ವಿಚಾರಣೆಯ ಬಳಿಕ ಮಂಗಳವಾರ ನವೀನ್‌ನನ್ನು ಬಂಧಿಸಿದ್ದಾರೆ. ಸಂತೋಷ್ ದೇವಿ ಶರೀರದಲ್ಲಿ 12 ಗಾಯಗಳು ಕಂಡು ಬಂದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯು ತಿಳಿಸಿದೆ.
ನವೀನ್ ತಂದೆ ಲಕ್ಷ್ಮಣ ಸಿಂಗ್ ಅವರು ನಿವೃತ್ತ ಯೋಧರಾಗಿದ್ದು, ಪ್ರಸ್ತುತ ದಿಲ್ಲಿಯ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಅವರು ಸೋಮವಾರವಷ್ಟೇ ದಿಲ್ಲಿಯಿಂದ ಮರಳಿದ್ದರು.
ನವೀನ್ ಹಿಂದೆ ಜೆನ್‌ಪ್ಯಾಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು 2019ರಲ್ಲಿ ಮದುವೆಯಾಗಿದ್ದ. ಆದರೆ, ಆತನ ಹಿಂಸಾತ್ಮಕ ನಡವಳಿಕೆಯಿಂದಾಗಿ ಪತ್ನಿ ಮನೆ ಬಿಟ್ಟು ತೆರಳಿದ್ದಳು. ಉ.ಪ್ರ.ಪೋಲಿಸರು ನವೀನ್ ವಿರುದ್ಧ ವಾರಂಟ್‌ನ್ನು ಹೊರಡಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.