ರಾಜಸ್ಥಾನ | ಪ್ರಧಾನಿ ರ‍್ಯಾಲಿಯಲ್ಲಿ ತಾಂತ್ರಿಕ ದೋಷ : ಐಟಿ ಕಾರ್ಯದರ್ಶಿ ಅರ್ಚನಾ ಹುದ್ದೆಗೆ ಕುತ್ತು
ಅರ್ಚನಾ ಸಿಂಗ್ (Photo credit: newindianexpress.com)
ಜೈಪುರ,ಸೆ.28 : ಬಾಂಸವಾಡಾದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಬಳಿಕ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ಅವರನ್ನು ರಾಜಸ್ಥಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ(ಐಟಿ ಆ್ಯಂಡ್ ಸಿ) ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಗಿದೆ.
ಪ್ರಧಾನಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದಾಗ ವೀಡಿಯೊ ವ್ಯವಸ್ಥೆ ವಿಫಲಗೊಂಡಿತ್ತು ಮತ್ತು ನೇರ ಪ್ರಸಾರದಲ್ಲಿ ಸುಮಾರು 10 ನಿಮಿಷಗಳ ಕಾಲ ಅಡಚಣೆ ಉಂಟಾಗಿತ್ತು ಎನ್ನಲಾಗಿದೆ. ರೈತರೊಂದಿಗೆ ಮೋದಿ ಸಂವಾದದ ವೇಳೆಯಲ್ಲಿ ಆಡಿಯೋ ಸಮಸ್ಯೆಗಳೂ ಕಾಣಿಸಿಕೊಂಡಿದ್ದವು.
ಈ ಲೋಪಗಳು ಸಿಂಗ್ ತನ್ನ ಹುದ್ದೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು, ಅವರನ್ನು ಈಗ ನಿಯೋಜನೆ ಆದೇಶಕ್ಕಾಗಿ ಕಾಯುತ್ತಿರುವ ಅಧಿಕಾರಿಗಳ ಪಟ್ಟಿಯಲ್ಲಿರಿಸಲಾಗಿದೆ. ತಮ್ಮ ಪ್ರಸ್ತುತ ಹುದ್ದೆಯಿಂದ ಬಿಡುಗಡೆಗೊಂಡ, ಆದರೆ ಹೊಸ ಹುದ್ದೆಯನ್ನು ಇನ್ನೂ ಪಡೆಯದ ಅಧಿಕಾರಿಗಳು ಈ ಪಟ್ಟಿಯಲ್ಲಿ ಸೇರುತ್ತಾರೆ.
ಸಿಬ್ಬಂದಿ ಇಲಾಖೆಯು ಹೊರಡಿಸಿರುವ ಆದೇಶವು ಸಿಂಗ್ ಅವರನ್ನು ಹುದ್ದೆಯಿಂದ ತೆಗೆಯಲು ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿದೆ, ಆದರೆ ಅಧಿಕಾರಶಾಹಿ ವಲಯದಲ್ಲಿನ ಊಹಾಪೋಹಗಳಂತೆ ತಾಂತ್ರಿಕ ದೋಷಗಳನ್ನು ನಿರ್ಲಕ್ಷ್ಯ ಎಂದು ಪರಿಗಣಿಸಲಾಗಿದೆ. ಸರಕಾರದ ನಿರ್ಧಾರವು ರಾಜ್ಯ ಅಧಿಕಾರಶಾಹಿಯಲ್ಲಿ ಅಸಮಾಧಾನವನ್ನುಂಟು ಮಾಡಿದೆ.
2004ರ ಐಎಎಸ್ ತಂಡದ ಅಧಿಕಾರಿಯಾಗಿರುವ ಸಿಂಗ್ ಈ ಹಿಂದೆ ರಾಜಸ್ಥಾನದ ಹಲವಾರು ಪ್ರಮುಖ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.