Rajasthan | B L ಸಂತೋಷ್ ಭೇಟಿ ಬಳಿಕ S I R ಪಟ್ಟಿಯಲ್ಲಿ ಹೆಸರು ಅಳಿಸುವಿಕೆಗೆ ವೇಗ: ಕಾಂಗ್ರೆಸ್ ಆರೋಪ
"BJP ಯೊಂದಿಗೆ ಚುನಾವಣಾ ಆಯೋಗ ಶಾಮೀಲು"
Photo Credit : timesofindia.indiatimes.com
ಜೈಪುರ: ಜನವರಿ 3ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ರಾಜಸ್ಥಾನ ಭೇಟಿಯ ಬಳಿಕ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹೆಸರು ಅಳಿಸುವಿಕೆ ವೇಗಗೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಸ್‌ಐಆರ್ ನಂತರ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 45 ಲಕ್ಷ ಮತದಾರರನ್ನು ಗೈರುಹಾಜರಿ, ಸ್ಥಳಾಂತರ ಅಥವಾ ಮರಣ ಹೊಂದಿದವರಾಗಿ ವರ್ಗೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಸೋಮವಾರ ದೂರಿದರು.
ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕರಾಮ್ ಜುಲ್ಲಿ, ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಬಿಜೆಪಿ ನೇರವಾಗಿ ಕೈವಾಡವಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ಸಹಕಾರವೂ ಇದೆ ಎಂದು ಅವರು ದೂರಿದರು.
ಎಸ್‌ಐಆರ್ ಬಳಿಕ ಪ್ರಕಟವಾದ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿ ಜನವರಿ 15ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು. ಆದರೆ, ಜನವರಿ 3ರಂದು ಸಂತೋಷ್ ಅವರ ರಾಜಸ್ಥಾನ ಭೇಟಿ ಮತ್ತು ಜನವರಿ 13ರಂದು ಶಾ ಅವರ ರಾಜ್ಯ ವಾಸ್ತವ್ಯದ ನಂತರ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯ ಸ್ವರೂಪವೇ ಬದಲಾಗಿದೆ ಎಂದು ದೋತಾಸ್ರಾ ಆರೋಪಿಸಿದರು.
ಕ್ಷೇತ್ರವಾರು ‘ನಕಲಿ, ಕಂಪ್ಯೂಟರ್–ರಚಿತ ನಮೂನೆಗಳನ್ನು’ ಮುದ್ರಿಸಿ ವಿತರಿಸಲಾಗಿದ್ದು, ಜನವರಿ 3ರಿಂದ 13ರ ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಗೆದ್ದ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಹೆಸರು ಅಳಿಸುವಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿದ ದೋತಾಸ್ರಾ, ಡಿಸೆಂಬರ್ 17ರಿಂದ ಜನವರಿ 14ರವರೆಗೆ ಬಿಜೆಪಿಯ 937 ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) 211 ಹೆಸರುಗಳನ್ನು ಸೇರಿಸಲು ಮತ್ತು 5,694 ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಇದೇ ಅವಧಿಯಲ್ಲಿ ಕಾಂಗ್ರೆಸ್ ನ 110 ಬಿಎಲ್‌ಎಗಳು 185 ಹೆಸರುಗಳನ್ನು ಸೇರಿಸಲು ಹಾಗೂ ಎರಡು ಹೆಸರುಗಳನ್ನು ಮಾತ್ರ ಅಳಿಸಲು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಇದಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10,000ರಿಂದ 15,000ವರೆಗೆ ನಕಲಿ ಬಿಎಲ್‌ಎ ಸಹಿಗಳನ್ನು ಹೊಂದಿರುವ ಗಣಕೀಕೃತ ಫಾರ್ಮ್‌ಗಳನ್ನು ಮುದ್ರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.