ರಾಜಸ್ಥಾನ: ಶಂಕಿತ ಅಕ್ರಮ ಜಾನುವಾರು ಸಾಗಾಟಗಾರರು- ಸ್ವಘೋಷಿತ ಗೋರಕ್ಷಕರ ನಡುವೆ ಘರ್ಷಣೆ; ಯುವಕ ಸಾವು
ಅಮಾಯಕನ ಗುಂಡಿಕ್ಕಿ ಹತ್ಯೆ: ಕುಟುಂಬ ಆರೋಪ
ಸಾಂದರ್ಭಿಕ ಚಿತ್ರ | Photo Credit : PTI
ಜೈಪುರ: ರಾಜಸ್ಥಾನದ ಭಿವಾಡಿಯಲ್ಲಿ ಸೋಮವಾರ ಮುಂಜಾನೆ ಶಂಕಿತ ಅಕ್ರಮ ಜಾನುವಾರು ಸಾಗಾಟಗಾರರು ಹಾಗೂ ಸ್ವಘೋಷಿತ ಗೋರಕ್ಷಕರ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು newindianexpress.com ವರದಿ ಮಾಡಿದೆ.
ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಕುಟುಂಬ ಪ್ರತಿಭಟನೆ ನಡೆಸಿದೆ. ಆತನನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಆದರೆ, ವಿವರವಾದ ತನಿಖೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಏನು ಎಂಬುದು ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀವಾಡಿ ಡಿಎಸ್‌ಪಿ ಕೈಲಾಸ್ ಚೌಧರಿ ಪ್ರಕಾರ, ಜಾನುವಾರುಗಳನ್ನು ತುಂಬಿದ್ದ ಪಿಕಪ್ ಟ್ರಕ್ ಟಪುಕಡದಿಂದ ತಾವಡು ಕಡೆಗೆ ತೆರಳುತ್ತಿದೆ, ಕೆಲವರು ಆ ಪಿಕ್ ಅಪ್ ಟ್ರಕ್ ಅನ್ನು ಬೆನ್ನಟ್ಟುತ್ತಿದ್ದಾರೆ ಎಂದು ಚೌಪಂಕಿ ಪೊಲೀಸ್ ಠಾಣೆ ಬೆಳಗ್ಗೆ ಸುಮಾರು 5 ಗಂಟೆಗೆ ಮಾಹಿತಿ ಸ್ವೀಕರಿಸಿತ್ತು. ಅನಂತರ ಸಾರೆ ಕಲಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ಘರ್ಷಣೆಯ ಸಂದರ್ಭ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. ಘಟನೆಯಲ್ಲಿ ಹರ್ಯಾಣದ ಉತಾವಡ್ ಗ್ರಾಮದ ನಿವಾಸಿ ಅಮೀರ್ ಗಂಭೀರವಾಗಿ ಗಾಯಗೊಂಡ. ಆತನನ್ನು ಭಿವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಅಕ್ರಮ ಜಾನುವಾರು ಸಾಗಾಟದಲ್ಲಿ ಅಮೀರ್ ಭಾಗಿಯಾಗಿರುವುದನ್ನು ಆತನ ಕುಟುಂಬ ನಿರಾಕರಿಸಿದೆ. ಹಿಂಸಾಚಾರ ಭುಗಿಲೆದ್ದಾಗ ಆತ ರಸ್ತೆ ಬದಿ ನಿಂತಿದ್ದ ಎಂದು ಅವರು ಹೇಳಿದ್ದಾರೆ.
‘‘ಅಮೀರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆತ ವಿವಾಹಿತ. ಆತ ಪತ್ನಿ ಹಾಗೂ ಎರಡು ವರ್ಷ ಪ್ರಾಯದ ಪುತ್ರಿಯನ್ನು ಅಗಲಿದ್ದಾನೆ’’ ಎಂದು ಅಮೀರ್ ಅವರ ಮಾವ ಯೆಹ್ಯಾ ಖಾನ್ ತಿಳಿಸಿದ್ದಾರೆ.
ಆತ ನುಹ್ ಮೇವಾತ್ ಉತಾವಡದಿಂದ ಸಾರೆ ಕಲಾ ಗ್ರಾಮಕ್ಕೆ ವಾಹನವನ್ನು ಕೊಂಡೊಯ್ಯಲು ಬಂದಿದ್ದ. ಜಾನುವಾರುಗಳನ್ನು ತುಂಬಿದ್ದ ಪಿಕ್ ಅಪ್ ಟ್ರಕ್ ಹಾದು ಹೋದಾಗ ಆತ ತನ್ನ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ನಿಂತು ಕಾಯುತ್ತಿದ್ದ ಎಂದು ಕುಟುಂಬ ಹೇಳಿದೆ.
ಪಿಕ್ ಅಪ್ ಟ್ರಕ್ ಹಾದು ಹೋದಾಗ ಕೆಲವರು ಅಮೀರ್ ಹಾಗೂ ಅವರ ಗೆಳೆಯ ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂದು ತಪ್ಪು ಭಾವಿಸಿದರು. ಅವರು ತಮ್ಮ ವಾಹನವನ್ನು ಅವರಿಗೆ ಢಿಕ್ಕಿ ಹೊಡೆಸಿದರು. ದಾಳಿ ನಡೆಸಿದರು. ಐದರಿಂದ ಆರು ಸುತ್ತು ಗುಂಡು ಹಾರಿಸಿದರು. ಇದರಿಂದ ಅಮೀರ್ ಅವರ ಕಣ್ಣಿನ ಸಮೀಪ ಗುಂಡು ತಗಲಿತು. ಅವರು ಕೆಳಗೆ ಬಿದ್ದರು ಎಂದು ಯೆಹ್ಯಾ ಖಾನ್ ಆರೋಪಿಸಿದ್ದಾರೆ.