ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಪತಿ: ಜೈಪುರ ಮೇಯರ್ ಮುನೇಶ್ ಗುರ್ಜರ್ ರನ್ನು ಅಮಾನತುಗೊಳಿಸಿದ ರಾಜಸ್ಥಾನ ಸರಕಾರ
Photo: Twitter | NDTV
ಜೈಪುರ: ಜಮೀನು ಗುತ್ತಿಗೆ ನೀಡಲು 2 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಮುನೇಶ್ ಗುರ್ಜರ್ ಅವರ ಪತಿ ಸುಶೀಲ್ ಗುರ್ಜರ್ ಅವರನ್ನು ನಿನ್ನೆ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿರುವ ಹಿನ್ನೆಲೆಯಲ್ಲಿ ಮೇಯರ್ ಮುನೇಶ್ ಗುರ್ಜರ್ ಅವರನ್ನು ರಾಜಸ್ಥಾನ ಸರಕಾರ ತಡರಾತ್ರಿಯ ಆದೇಶದಲ್ಲಿ ಅಮಾನತುಗೊಳಿಸಿದೆ. .
ಜೈಪುರದ ಹೆರಿಟೇಜ್ ಕಾರ್ಪೊರೇಷನ್ನಲ್ಲಿ ವಾರ್ಡ್ ಸಂಖ್ಯೆ 43ನ್ನು ಪ್ರತಿನಿಧಿಸುತ್ತಿದ್ದ ಮುನೇಶ್ ಗುರ್ಜರ್ ಅವರನ್ನು ನಗರಪಾಲಿಕೆ ಸದಸ್ಯ ಸ್ಥಾನದಿಂದಲೂ ಅಮಾನತುಗೊಳಿಸಲಾಗಿದೆ
ಮೇಯರ್ ಅವರ ಪತಿ ಮೇಯರ್ ನಿವಾಸದಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಆಗ ಮೇಯರ್ ಅಲ್ಲಿಯೇ ಇದ್ದರು. ನಿವಾಸದಿಂದ 40 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದರಿಂದ ಮೇಯರ್ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂದು . ಆದೇಶದಲ್ಲಿ ತಿಳಿಸಲಾಗಿದೆ.
ಸುಶೀಲ್ ಗುರ್ಜಾರ್ ಸಹಿತ ಇಬ್ಬರನ್ನು ಎಸಿಬಿ ಬಂಧಿಸಿದ್ದು, ಎರಡು ದಿನಗಳಲ್ಲಿ ಅವರನ್ನು ವಿಚಾರಣೆ ನಡೆಸಲಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಸುಶೀಲ್ ಗುರ್ಜಾರ್ ತನ್ನ ಸಹಾಯಕರಾದ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಮೂಲಕ ಪ್ಲಾಟ್ಗಾಗಿ ಗುತ್ತಿಗೆ ಅರ್ಜಿಯನ್ನು ತ್ವರಿತವಾಗಿ ಅಂಗೀಕರಿಸಲು ದೂರುದಾರರಿಂದ 2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ. ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.