ರಾಜಸ್ಥಾನ | ಶಾಲಾ ಕಟ್ಟಡ ಕುಸಿತ; 7 ಮಂದಿ ವಿದ್ಯಾರ್ಥಿಗಳು ಸಾವು
Photo | NDTV
ಕೋಟಾ, ಜು. 25: ರಾಜಸ್ಥಾನದ ಝಲಾವರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಭಾಗವೊಂದು ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ 7 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಹಾಗೂ 28 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳು ಬೆಳಗ್ಗಿನ ಪ್ರಾರ್ಥನೆಗೆ ಸೇರಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
6 ಹಾಗೂ 7ನೇ ತರಗತಿ ಇರುವ ಕಟ್ಟಡದ ಭಾಗ ಬೆಳಗ್ಗೆ ಸುಮಾರು 7.45ಕ್ಕೆ ಕುಸಿಯಿತು. ಇದರಿಂದ ಸರಿಸುಮಾರು 35 ವಿದ್ಯಾರ್ಥಿಗಳು ಅವಶೇಷಗಳ ಅಡಿ ಸಿಲುಕಿದರು. 7 ಮಕ್ಕಳು ಮೃತಪಟ್ಟರು ಎಂದು ಮನೋಹರ್‌ಥಾನಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ನಂದಕಿಶೋರ್ ವರ್ಮಾ ತಿಳಿಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿಗಳನ್ನು ಪಾಯಲ್ (14), ಪ್ರಿಯಾಂಕಾ (14), ಹರೀಶ್ (8), ಸೋನಾ ಭಾ (5), ಕಾರ್ತಿಕ್ (8) ಹಾಗೂ ಮೀನಾ (8) ಎಂದು ಗುರುತಿಸಲಾಗಿದೆ. ಎಲ್ಲರೂ ಪಿಪ್ಲೋಡಿ ಗ್ರಾಮದ ಮಕ್ಕಳು.
ಅಧಿಕಾರಿಗಳು ನೆರವು ನೀಡುವ ಮುನ್ನವೇ ಗಾಯಗೊಂಡ ಹಲವು ವಿದ್ಯಾರ್ಥಿಗಳನ್ನು ಖಾಸಗಿ ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 9 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುರ್ಘಟನೆಗೆ ಸಂಬಂಧಿಸಿ ಶಾಲೆಯ ಮುಖ್ಯೋಪಾದ್ಯಾಯ ಮೀನಾ ಗರ್ಗ್ ಹಾಗೂ ಶಿಕ್ಷಕರಾದ ಜಾವೇದ್ ಅಹ್ಮದ್, ರಾಮ್‌ವಿಲಾಸ್ ಲವಂಶಿ, ಕನ್ಹಯ್ಯಲಾಲ್ ಸುಮನ್ ಹಾಗೂ ಬದ್ರಿಲಾಲ್ ಲೋಧನನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
1994ರಲ್ಲಿ ಪಂಚಾಯತ್ ರಾಜ್ ಇಲಾಖೆ ಈ ಕಟ್ಟಡ ನಿರ್ಮಾಣ ಮಾಡಿತ್ತು. ಇದುವರೆಗೆ ಈ ಕಟ್ಟಡ ದುರಸ್ಥಿಗೆ ಒಳಗಾಗಿಲ್ಲ. ಇತ್ತೀಚೆಗಿನ ಭಾರೀ ಮಳೆಯಿಂದ ದುರ್ಬಲಗೊಂಡು ಕಟ್ಟಡ ಕುಸಿದಿದೆ ಎಂದು ಹೆಚ್ಚುವರಿ ಜಿಲ್ಲಾ ಶಿಕ್ಷಣಾಧಿಕಾರಿ ಹಂಸರಾಜ್ ಮೀನಾ ತಿಳಿಸಿದ್ದಾರೆ.