ಅತ್ಯಾಚಾರ ಆರೋಪ: 'ಮಗನನ್ನು ಗಲ್ಲಿಗೇರಿಸಿ' ಎಂದ ಆರೋಪಿಯ ತಂದೆ
ಇಂಧೋರ್: "ನಾನಾಗಿದ್ದರೆ ಆತನಿಗೆ ಗುಂಡಿಟ್ಟು ಸಾಯಿಸುತ್ತಿದ್ದೆ. ಆತ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಮರಣದಂಡನೆಯೇ ಆತನಿಗೆ ಸೂಕ್ತ ಶಿಕ್ಷೆ"- ಇದು ಅತ್ಯಾಚಾರಿ ಆರೋಪಿಯ ತಂದೆ ನೀಡಿದ ಹೇಳಿಕೆ. ಬಾಲಕಿಗೆ ಲಿಫ್ಟ್ ನೀಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 24 ವರ್ಷ ವಯಸ್ಸಿನ ರಿಕ್ಷಾಚಾಲಕನ ತಂದೆ ಈ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.
"ಇಂಥವನಿಗೆ ಬೇರೆ ಎಂಥ ಶಿಕ್ಷೆ ನೀಡಬೇಕು? ಇಂಥವರನ್ನು ಗಲ್ಲಿಗೇರಿಸಿದರೆ ಮಾತ್ರ ಇಂಥ ಅಪರಾಧಗಳಿಂದ ವಿಮುಖರಾಗಲು ಉತ್ತಮ ನಿದರ್ಶನ ನೀಡಿದಂತಾಗುತ್ತದೆ. ಅಪರಾಧ ಎಸಗಿದ ಬಳಿಕವೂ ಆತ ನಮ್ಮ ಜತೆಗಿದ್ದ. ಆದರೆ ಆತನ ಅಪರಾಧದ ಬಗ್ಗೆ ನನಗೆ ಅರಿವು ಇರಲಿಲ್ಲ. ಇದು ನನಗೆ ಮೊದಲೇ ತಿಳಿದಿದ್ದರೆ ನಾನೇ ಗುಂಡಿಟ್ಟು ಸಾಯಿಸುತ್ತಿದ್ದೆ" ಎಂದು ಆರೋಪಿ ಭರತ್ ಸೋನಿಯ ತಂದೆ ರಾಜು ಸೋನಿ ಕಣ್ಣೀರಿಡುತ್ತಾ ಭಾವುಕರಾದರು.
"ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಪತ್ರಿಕೆಗಳಲ್ಲಿ ಇದನ್ನು ಓದಿದಾಗ ನಮಗೆ ಆಘಾತವಾಯಿತು. ನಮ್ಮ ಅಂಗಡಿಯಿಂದ ಪೊಲೀಸರು ಆತನನ್ನು ಬಂಧಿಸಿದ ಬಳಿಕವಷ್ಟೇ, ಈ ಭಯಾನಕ ಅಪರಾಧವನ್ನು ಮಗ ಎಸಗಿದ್ದು ಗಮನಕ್ಕೆ ಬಂತು" ಎಂದು ಹೇಳಿದರು.
ಭರತ್ ಸಾಮಾನ್ಯವಾಗಿ ಮುಂಜಾನೆ 2-3 ಗಂಟೆಗೆ ಕೆಲಸದಿಂದ ಬರುತ್ತಿದ್ದ. ಆದರೆ ಸೋಮವಾರ ಮುಂಜಾನೆ ಮತ್ತೂ ವಿಳಂಬವಾಗಿರಬೇಕು. ಮಂಗಳವಾರ ನಡೆದ ಅತ್ಯಾಚಾರ ಪ್ರಕರಣ ಎಷ್ಟು ಭಯಾನಕ ಎಂಬ ಬಗ್ಗೆಯೂ ನಾವು ಮಾತನಾಡಿದ್ದೆವು. ಎಲ್ಲಿ ಈ ಘಟನೆ ನಡೆದಿದೆ ಎಂದು ನಮ್ಮನ್ನೇ ಪ್ರಶ್ನಿಸಿದ್ದ ಆತ ಕೆಲಸಕ್ಕೆ ತೆರಳಿದ್ದ" ಎಂದರು.
ಭರತ್ ಉಜ್ಜಯಿನಿಯ ನಾನಾಖೇಡ ಪ್ರದೇಶದ ನಿವಾಸಿಯಾಗಿದ್ದು, ಇದಕ್ಕೂ ಮುನ್ನ ಎರಡು ಹಿಂಸಾ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಫೋಕ್ಸೋ ನ್ಯಾಯಾಲಯ ಆತನನ್ನು ಒಂದು ವಾರದ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಉಜ್ಜಯಿನಿ ವಕೀಲರ ಸಂಘದ ಯಾರೂ ಈತನ ಪರವಾಗಿ ವಾದ ಮಂಡಿಸಿಲ್ಲ.