×
Ad

ಭಾರತ ಅಮೆರಿಕದ ನಿರ್ಣಾಯಕ ಪಾಲುದಾರ : ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ

ಮಾರ್ಕೊ ರೂಬಿಯೊ-ಎಸ್.ಜೈಶಂಕರ್ ಭೇಟಿ, ಮಹತ್ವದ ಮಾತುಕತೆ

Update: 2025-09-23 13:07 IST

Photo : X/ @DrSJaishankar

ನ್ಯೂಯಾರ್ಕ್: “ಭಾರತದೊಂದಿಗಿನ ಸಂಬಂಧ ಅಮೆರಿಕಕ್ಕೆ ನಿರ್ಣಾಯಕ ಮತ್ತು ಪ್ರಾಮುಖ್ಯವಾದುದು” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಸಂದರ್ಭದಲ್ಲಿ ಸೋಮವಾರ ಬೆಳಿಗ್ಗೆ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.

ಸಭೆಯ ನಂತರ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ, ರೂಬಿಯೊ ಅವರು ವ್ಯಾಪಾರ, ರಕ್ಷಣಾ, ಇಂಧನ, ಔಷಧ ಉತ್ಪಾದನೆ, ನಿರ್ಣಾಯಕ ಖನಿಜಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತದ ನಿರಂತರ ವ್ಯಾಪಾರ ಸಂಬಂಧವನ್ನು ಶ್ಲಾಘಿಸಿದರು. ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ವ್ಯಾಪಾರ ವಹಿವಾಟು ಬಲಪಡಿಸಲು ಅಮೆರಿಕ ಮತ್ತು ಭಾರತವು ಒಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಇಬ್ಬರು ನಾಯಕರು ಪುನರುಚ್ಚರಿಸಿದರು.

ಸುಮಾರು ಒಂದು ಗಂಟೆ ನಡೆದ ಈ ಮಾತುಕತೆ, ಇತ್ತೀಚಿನ ಆರ್ಥಿಕ ಉದ್ವಿಗ್ನತೆಯ ನಂತರ ನಡೆದ ಪ್ರಥಮ ಮುಖಾಮುಖಿ ಸಂವಾದವಾಗಿತ್ತು. ಟ್ರಂಪ್ ಆಡಳಿತವು ರಷ್ಯಾದ ತೈಲ ಖರೀದಿಗೆ ಪ್ರತಿಯಾಗಿ ಭಾರತಕ್ಕೆ ಹೆಚ್ಚುವರಿ 25 ಶೇಕಡಾ ಸುಂಕ ವಿಧಿಸಿತ್ತು. ಬಳಿಕ ಒಟ್ಟು ಸುಂಕವನ್ನು 50 ಶೇಕಡಕ್ಕೆ ಏರಿಸಿತ್ತು. ಇದರ ಪರಿಣಾಮವಾಗಿ ಉಭಯ ದೇಶಗಳ ವ್ಯಾಪಾರ ಸಂಬಂಧಗಳ ಮೇಲೆ ಭಾರಿ ಹೊಡೆತ ಬಿದ್ದಿತ್ತು.

ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ H1B ವೀಸಾಗಳಿಗೆ 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸುವ ಘೋಷಣೆಗೆ ಸಹಿ ಹಾಕಿದ್ದು, ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಭಾರತೀಯ ಐಟಿ ಹಾಗೂ ವೈದ್ಯಕೀಯ ವೃತ್ತಿಪರರಲ್ಲಿ ಆತಂಕ ಮೂಡಿಸಿದೆ.

ಸಭೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, “ರುಬಿಯೊ ಅವರನ್ನು ಭೇಟಿಯಾಗುವುದು ಸಂತೋಷದಾಯಕ. ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಅನೇಕ ಪ್ರಮುಖ ವಿದ್ಯಮಾನಗಳ ಕುರಿತು ನಮ್ಮ ಮಾತುಕತೆ ನಡೆಯಿತು. ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಗತಿಗೆ ನಿರಂತರ ದ್ವಿಪಕ್ಷೀಯ ಮಾತುಕತೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ನಾವು ಸಂಪರ್ಕದಲ್ಲಿರುತ್ತೇವೆ” ಎಂದು ತಿಳಿಸಿದ್ದಾರೆ.

ಈ ನಡುವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ನಿಯೋಗವು ಸೆಪ್ಟೆಂಬರ್ 22ರಂದು ನ್ಯೂಯಾರ್ಕ್‌ನಲ್ಲಿ ಅಮೆರಿಕದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲು ಸಜ್ಜಾಗಿದೆ. “ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದ ಪ್ರಾಥಮಿಕ ತೀರ್ಮಾನವನ್ನು ಸಾಧಿಸಲು ಚರ್ಚೆಗಳು ಮುಂದುವರಿಯುತ್ತವೆ” ಎಂದು ವಾಣಿಜ್ಯ ಸಚಿವಾಲಯ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News