ಕೇಜ್ರಿವಾಲ್ ರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ | ದಿಲ್ಲಿ ಹೈಕೋರ್ಟ್ ಗೆ ಆಪ್ ನ ಮಾಜಿ ಶಾಸಕನ ಮೊರೆ
ಅರವಿಂದ ಕೇಜ್ರಿವಾಲ್ | PC : PTI
ಹೊಸದಿಲ್ಲಿ : ಬಂಧನದಲ್ಲಿರುವ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ದಿಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಮಾಜಿ ಆಪ್ ಶಾಸಕ ಸಂದೀಪ ಕುಮಾರ್ ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ಅರ್ಜಿಯನ್ನು ಸೋಮವಾರ ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರೆದುರು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಈಗ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ)ಯಿಂದ ಬಂಧಿಸಲ್ಪಟ್ಟ ಬಳಿಕ ಕೇಜ್ರಿವಾಲ್ ಅವರು ಸಂವಿಧಾನದಡಿ ಮುಖ್ಯಮಂತ್ರಿಯ ಕಾರ್ಯಗಳನ್ನು ನಿರ್ವಹಿಸಲು ‘ಅಸಮರ್ಥ’ರಾಗಿದ್ದಾರೆ. ಅವರ ಅಲಭ್ಯತೆಯು ಸಾಂವಿಧಾನಿಕ ಕಾರ್ಯವಿಧಾನವನ್ನು ಜಟಿಲಗೊಳಿಸಿದೆ ಮತ್ತು ಸಂವಿಧಾನದ ಆದೇಶದಂತೆ ಅವರು ಜೈಲಿನಿಂದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಕುಮಾರ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ಮಾ.21ರಂದು ಈಡಿ ಯಿಂದ ಬಂಧಿಸಲ್ಪಟ್ಟಿದ್ದ ಕೇಜ್ರಿವಾಲ್ ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಉಚ್ಛ ನ್ಯಾಯಾಲಯವು ಈ ಹಿಂದೆ ಮುಖ್ಯಮಂತ್ರಿ ಹುದ್ದೆಯಿಂದ ಕೇಜ್ರಿವಾಲ್ರ ವಜಾಕ್ಕೆ ಕೋರಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಿರಸ್ಕರಿಸಿತ್ತು.