ಮುಂಬೈನಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’; ಶಿಂಧೆ ಬಣದ ಶಿವಸೇನೆಯ ಕಾರ್ಪೊರೇಟರ್‌ಗಳು ಫೈವ್ ಸ್ಟಾರ್ ಹೋಟೆಲ್ ಗೆ ಶಿಫ್ಟ್!
ಏಕನಾಥ್ ಶಿಂಧೆ (Photo: PTI)
ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ ಅಧಿಕಾರ ರಚನೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತನ್ನ ಹೊಸದಾಗಿ ಆಯ್ಕೆಯಾದ ಎಲ್ಲ ಕಾರ್ಪೊರೇಟರ್‌ಗಳನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಉಳಿಯುವಂತೆ ಸೂಚಿಸಿದೆ. ಈ ಕ್ರಮದೊಂದಿಗೆ ನಗರ ರಾಜಕಾರಣದಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’ದ ಚರ್ಚೆ ಆರಂಭವಾಗಿದೆ ಎಂದು indiatoday.in ವರದಿ ಮಾಡಿದೆ.
ಪಕ್ಷದ ಮೂಲಗಳ ಪ್ರಕಾರ, ಶಿಂಧೆ ಸೇನಾ ಟಿಕೆಟ್ ನಲ್ಲಿ ಆಯ್ಕೆಯಾದ 29 ಕಾರ್ಪೊರೇಟರ್ ಗಳು ಬುಧವಾರ ಮಧ್ಯಾಹ್ನದೊಳಗೆ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗೆ ಆಗಮಿಸಿ, ಮುಂದಿನ ಮೂರು ದಿನಗಳವರೆಗೆ ಅಲ್ಲಿಯೇ ಉಳಿಯಲಿದ್ದಾರೆ. ಬಿಎಂಸಿ ನಾಯಕತ್ವದ ಕುರಿತು ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಪಕ್ಷಗಳಿಂದ ‘ ಕುದುರೆ ವ್ಯಾಪಾರ’ ಪ್ರಯತ್ನಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
29 ಸ್ಥಾನಗಳನ್ನು ಹೊಂದಿರುವ ಶಿಂಧೆ ಬಣ, ಸ್ವಂತ ಬಹುಮತದ ಕೊರತೆಯಲ್ಲಿರುವ ಬಿಜೆಪಿಗೆ ನಿರ್ಣಾಯಕ ಬೆಂಬಲಿಗನಾಗಿ ಹೊರಹೊಮ್ಮಿದೆ. ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆಯಾದ ಬಿಎಂಸಿಯಲ್ಲಿ ಅಧಿಕಾರದ ಹಕ್ಕು ಅಧಿಕೃತವಾಗುವವರೆಗೆ ಎಲ್ಲ ಕಾರ್ಪೊರೇಟರ್‌ಗಳು ಒಟ್ಟಿಗೆ ಇರಬೇಕೆಂಬುದು ಶಿಂಧೆಯ ಉದ್ದೇಶ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಇಂತಹ ಕ್ರಮ ಹೊಸದಲ್ಲ. 2019ರ ವಿಧಾನಸಭೆ ಚುನಾವಣೆಯ ನಂತರದ ಬಿಕ್ಕಟ್ಟು ಹಾಗೂ 2022ರ ಶಿವಸೇನೆ ವಿಭಜನೆಯ ಸಂದರ್ಭದಲ್ಲಿ ಪಕ್ಷಾಂತರದ ಭೀತಿಯಿಂದ ಶಾಸಕರನ್ನು ಹೋಟೆಲ್‌ಗಳಲ್ಲಿ ಉಳಿಸಿದ್ದ ಉದಾಹರಣೆಗಳಿವೆ.
ಈ ಬೆಳವಣಿಗೆಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ, “ತಮ್ಮ ಕೌನ್ಸಿಲರ್‌ಗಳನ್ನು ಯಾರು ತಮ್ಮತ್ತ ಸೆಳೆಯುತ್ತಾರೆ? ಈ ಅನುಭವ ಯಾರಿಗೆ ಇದೆ?” ಎಂದು ಪ್ರಶ್ನಿಸಿದರು.
ಇತ್ತ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಧಿಕಾರ, ಹಣ ಮತ್ತು ಒತ್ತಡದ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಬಿಎಂಸಿ ಮೇಯರ್ ಸ್ಥಾನವನ್ನು ತಮ್ಮ ಪಕ್ಷ ಬಯಸಿದ್ದರೂ, ಪ್ರಸ್ತುತ ಸಂಖ್ಯಾಬಲದ ಕೊರತೆಯನ್ನು ಅವರು ಒಪ್ಪಿಕೊಂಡರು.
ಬಿಎಂಸಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 227 ವಾರ್ಡ್‌ಗಳಲ್ಲಿ 89 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿದೆ. ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆದು ಮಹಾಯುತಿ ಮೈತ್ರಿಕೂಟದ ಸಂಖ್ಯೆಯನ್ನು 118ಕ್ಕೆ ತಲುಪಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 65 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 24 ಸ್ಥಾನಗಳನ್ನು ಪಡೆದರೆ, ಎಐಎಂಐಎಂ ಎಂಟು ಸ್ಥಾನಗಳನ್ನು ಗೆದ್ದಿದೆ.
ರಿಸಾರ್ಟ್ ರಾಜಕಾರಣ: ಕುದುರೆ ವ್ಯಾಪಾರದ ಭೀತಿ?
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಬಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ತಡೆಯಲು, ಎಲ್ಲಾ ಪ್ರತಿಪಕ್ಷಗಳು ಒಗ್ಗೂಡಿದಲ್ಲಿ ಅವುಗಳ ಒಟ್ಟು ಬಲ 106ಕ್ಕೇರಲಿದ್ದು, ಬಹುಮತಕ್ಕೆ ಕೇವಲ 8 ಸ್ಥಾನಗಳ ಕೊರತೆ ಬೀಳಲಿದೆ.
ಈ ಹಿನ್ನೆಲೆಯಲ್ಲಿ ನೂತನ ಕಾರ್ಪೊರೇಟರ್‌ಗಳ ಕುದುರೆ ವ್ಯಾಪಾರ ಅಥವಾ ಪಕ್ಷಾಂತರ ಭೀತಿಯನ್ನು ಮಹಾಯುತಿ ಎದುರಿಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಮಹಾಯುತಿ ಮೈತ್ರಿಕೂಟದಿಂದ ಕೇವಲ ಎಂಟು ಅಭ್ಯರ್ಥಿಗಳು ನಿಷ್ಠೆ ಬದಲಾಯಿಸಿದಲ್ಲಿ, ಬಿಎಂಸಿಯು ಬಿಜೆಪಿಯ ಪಾಲಾಗುವುದು ತಪ್ಪಲಿದೆ. ಈ ಅಪಾಯವನ್ನು ಗಣನೆಗೆ ತೆಗೆದುಕೊಂಡೇ ಶಿಂಧೆ ನೇತೃತ್ವದ ಶಿವಸೇನಾ ರಿಸಾರ್ಟ್ ರಾಜಕಾರಣದ ಮೊರೆಹೋಗಿದೆೆ ಎನ್ನಲಾಗಿದೆ.
ಮೇಯರ್ ಸ್ಥಾನಕ್ಕಾಗಿ ಬಿಜೆಪಿ ಮೇಲೆ ಒತ್ತಡದ ತಂತ್ರಗಾರಿಕೆ?
ಮೇಯರ್ ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ ಚೌಕಾಶಿ ನಡೆಸುವ ಉದ್ದೇಶದಿಂದಲೇ ಶಿಂಧೆ ಅವರು ರಿಸಾರ್ಟ್ ರಾಜಕಾರಣದ ತಂತ್ರಗಾರಿಕೆ ಅನುಸರಿಸಿದ್ದಾರೆನ್ನಲಾಗಿದೆ. ಶಿವಸೇನಾ (ಶಿಂಧೆ)ವು ಬಿಜೆಪಿಗಿಂತ ತುಂಬಾ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ, ಅದು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದೆಯೆನ್ನಲಾಗಿದೆ.
ಬಿಎಂಸಿಯಲ್ಲಿ ಕಿಂಗ್‌ಮೇಕರ್ ಆಗಿಇರುವ ಶಿಂಧೆ ಬಣಕ್ಕೆ ಈಗ ತನ್ನ ಪಕ್ಷದ ಕಾರ್ಪೊರೇಟರ್ ಒಬ್ಬರು ಪ್ರತಿಷ್ಠಿತ ಮುಂಬೈ ಮೇಯರ್ ಹುದ್ದೆಗೇರುವುದನ್ನು ಬಯಸುತ್ತಿದೆ. ಪಾರಂಪರಿಕವಾಗಿ ಈ ಹುದ್ದೆಯನ್ನು ಶಿವಸೇನಾವೇ ಹೊಂದಿತ್ತು. ಈಗಲೂ ಈ ಹುದ್ದೆಯು ತಮ್ಮಲ್ಲೇ ಉಳಿಯಬೇಕೆಂದು ಶಿಂಧೆ ಬಣದ ಕಾರ್ಪೊರೇಟರ್‌ಗಳು ಬಯಸುತ್ತಿದ್ದಾರೆ ಎನ್ನಲಾಗಿದೆ.
ಮೇಯರ್ ಹುದ್ದೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಕೂಡದೆಂದು ಮಹಾರಾಷ್ಟ್ರದ ಸರಕಾರದ ಉಪಮುಖ್ಯಮಂತ್ರಿಯಾದ ಏಕನಾಥ ಶಿಂದೆ ಸ್ವಪಕ್ಷದ ಕಾರ್ಪೊರೇಟರ್‌ಗಳಿಂದ ತೀವ್ರ ಒತ್ತಡ ಬಂದಿಯೆಂದು ಮೂಲಳು ತಿಳಿಸಿವೆ.
ಪ್ರತಿಷ್ಠಿತ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಆಳ್ವಿಕೆಯು ಕಳೆದ 25 ವರ್ಷಗಳಿಂದ ಅವಿಭಜಿತ ಶಿವಸೇನಾದ ವಶದಲ್ಲೇ ಇತ್ತು. ಈ ಸಲದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಆಕಾಂಕ್ಷೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.