×
Ad

ಕಂಗನಾ ರಣಾವತ್ ಪ್ರತಿಕೃತಿಗಾಗಿ ಪ್ರತಿಭಟನಾಕಾರರು ಮತ್ತು ಉತ್ತರ ಪ್ರದೇಶ ಪೋಲಿಸರ ನಡುವೆ ಹಗ್ಗ ಜಗ್ಗಾಟ

Update: 2024-08-28 23:30 IST

ಲಕ್ನೋ: ಬಿಜೆಪಿ ಸಂಸದೆ ಕಂಗನಾ ರಣಾವತ್ ರೈತರ ವಿರುದ್ಧ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಬುಧವಾರ ಹಾಪುರ್‌ನಲ್ಲಿ ಪ್ರತಿಭಟನೆ ನಡೆದಿದೆ. ಈ ಸಂದರ್ಭದಲ್ಲಿ ಸುಡಲು ತಂದಿದ್ದ ರಣಾವತ್ ಪ್ರತಿಕೃತಿಯನ್ನು ಪೋಲೀಸರು ಕಿತ್ತುಕೊಂಡ ಬಳಿಕ ಅವರ ಮತ್ತು ಭಾರತೀಯ ಕಿಸಾನ ಯೂನಿಯನ್(ಲೋಖಿತ್)ನ ಜಂಟಿ ಕಿಸಾನ ಮೋರ್ಚಾಕ್ಕೆ ಸೇರಿದ ಪ್ರತಿಭಟನಾಕಾರರ ನಡುವೆ ಹಗ್ಗ ಜಗ್ಗಾಟಕ್ಕೆ ಪ್ರತಿಭಟನೆಯು ಸಾಕ್ಷಿಯಾಗಿತ್ತು.

ಲಾಠಿಗಳನ್ನು ಹಿಡಿದುಕೊಂಡಿದ್ದ ಪೋಲಿಸರು ಪ್ರತಿಭಟನಾಕಾರರನ್ನು ಸುತ್ತುವರಿದಿದ್ದನ್ನು ಮತ್ತು ಅವರ ಕಾರಿನಿಂದ ರಣಾವತ್‌ರ ಪ್ರತಿಕೃತಿಯನ್ನು ಎಳೆದುಕೊಂಡು ಓಡುತ್ತಿದ್ದನ್ನು ವೀಡಿಯೊ ತೋರಿಸಿದೆ.

ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ರಸ್ತೆಯ ನಡುವೆ ಧರಣಿ ಕುಳಿತು ಪ್ರತಿಕೃತಿಯನ್ನು ಮರಳಿಸುವಂತೆ ಆಗ್ರಹಿಸಿದ್ದರು. ಇದರಿಂದಾಗಿ ದಿಲ್ಲಿ-ಲಕ್ನೋ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.

ರಣಾವತ್ ರೈತರ ವಿರುದ್ಧ ನಿರ್ಲಜ್ಜ ಹೇಳಿಕೆಗಳನ್ನು ನೀಡಿದ್ದು,ಅವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದು ಬಿಕೆಯು(ಲೋಖಿತ್) ವಕ್ತಾರ ಹರೀಶ್ ಹೂನ್ ಆಗ್ರಹಿಸಿದರು.

ಬಳಿಕ ಇನ್ನೊಂದು ಪ್ರತಿಕೃತಿಯನ್ನು ತಂದ ಪ್ರತಿಭಟನಾಕಾರರು ಅದನ್ನು ಸುಟ್ಟು ಹಾಕಿದರು.

ರೈತರ ವಿರುದ್ಧ ಕಂಗನಾರ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿದ ಬಳಿಕ ಅವರನ್ನು ತರಾಟೆಗೆತ್ತಿಕೊಂಡಿರುವ ಬಿಜೆಪಿ ನಾಯಕತ್ವವು, ಅವರ ಹೇಳಿಕೆಗಳು ಪಕ್ಷದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಕ್ಷದ ಪರವಾಗಿ ನೀತಿ ವಿಷಯಗಳಲ್ಲಿ ಮಾತನಾಡಲು ಕಂಗನಾಗೆ ಅಧಿಕಾರವಿಲ್ಲ. ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ.

ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿರದಿದ್ದರೆ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯು ಭಾರತದಲ್ಲಿ ಬಾಂಗ್ಲಾದೇಶದಂತಹ ಬಿಕ್ಕಟ್ಟಿಗೆ ಕಾರಣವಾಗುತ್ತಿತ್ತು ಎಂದು ಕಂಗನಾ ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News