ರಷ್ಯಾಕ್ಕೆ ಗಡಿಪಾರಾದರೆ ಮಕ್ಕಳನ್ನು ಭೇಟಿ ಮಾಡಲು ಸಾಧ್ಯವಿಲ್ಲ: ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆಯ ಇಸ್ರೇಲ್ ಮೂಲದ ಪತಿಯ ಹೇಳಿಕೆ
PC : thenewsminute.com
ಹೊಸದಿಲ್ಲಿ: ನಿನಾಳನ್ನು 8 ವರ್ಷದ ಹಿಂದೆ ಗೋವಾದಲ್ಲಿ ಭೇಟಿ ಮಾಡಿದ್ದೆ. ಆನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದೆವು. ಏಳು ತಿಂಗಳು ಭಾರತದಲ್ಲಿ ಒಟ್ಟಿಗಿದ್ದ ನಾವು ನಂತರ ಹೆಚ್ಚಿನ ಸಮಯವನ್ನು ಉಕ್ರೇನ್ ನಲ್ಲಿ ಕಳೆದೆವು ಎಂದು ಗೋಕರ್ಣದ ಗುಹೆಯೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಪತ್ತೆಯಾಗಿರುವ ರಷ್ಯಾದ ಮಹಿಳೆಯ ಇಸ್ರೇಲ್ ಮೂಲದ ಪತಿ ಡಾರ್ ಗೋಲ್ಡ್‌ಸ್ಟೈನ್ ಹೇಳಿದ್ದಾರೆ.
ಜುಲೈ 11ರಂದು ರಷ್ಯಾದ ಮಹಿಳೆ ನಿನಾ ಕುಟಿನಾ ಮತ್ತು ಆಕೆಯ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯೊಂದರಲ್ಲಿ ಪತ್ತೆಯಾಗಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಪತಿ ಡಾರ್ ಗೋಲ್ಡ್‌ಸ್ಟೈನ್, ‘ನನಗೆ ತಿಳಿಸದೆ ಗೋವಾದಿಂದ ಆಕೆ ಹೋಗಿದ್ದಳು. ಮಕ್ಕಳನ್ನು ನೋಡುವುದಕ್ಕಾಗಿಯೇ ಕಳೆದ ನಾಲ್ಕು ವರ್ಷದಿಂದ ಪದೇ ಪದೇ ಭಾರತಕ್ಕೆ ಬರುತ್ತಿದ್ದೇನೆ”, ಎಂದು ಹೇಳಿದ್ದಾರೆ.
“ಆಕೆ ಎಲ್ಲಿ ಹೋದರು ಎಂಬ ಬಗ್ಗೆ ನನಗೆ ಯಾವ ಮಾಹಿತಿಯು ಇರಲಿಲ್ಲ. ಆತಂಕಗೊಂಡ ನಾನು ನಾಪತ್ತೆ ಪ‍್ರಕರಣ ದಾಖಲಿಸಿದೆ. ಅವರು ಗೋಕರ್ಣದಲ್ಲಿ ಇದ್ದಾರೆ ಎಂಬ ಮಾಹಿತಿ ಬಂದಿದೆ. ನನಗೆ ಮಕ್ಕಳನ್ನು ನೋಡಬೇಕು ಅನಿಸುತ್ತಿದೆ. ಅವರು ಹೇಗಿದ್ದಾರೆ ಎಂದು ತಿಳಿದುಕೊಳ್ಳಬೇಕು. ಪತ್ನಿ ಮತ್ತು ಮಕ್ಕಳ ಖರ್ಚಿಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದೇನೆ. ಮಕ್ಕಳೊಂದಿಗೆ ಸಮಯ ಕಳೆಯಲು ನನ್ನ ಪತ್ನಿ ಬಿಡುವುದಿಲ್ಲ”, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ನಿ ಮತ್ತು ಮಕ್ಕಳ ಸಂಭಾವ್ಯ ಗಡೀಪಾರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಷ್ಯಾಕ್ಕೆ ನನ್ನ ಮಕ್ಕಳನ್ನು ಕಳುಹಿಸದಂತೆ ಮಾಡಲು ಇರುವ ಎಲ್ಲಾ ಪ್ರಯತ್ನಗಳನ್ನು ನಾನು ಮಾಡುತ್ತೇನೆ. ಒಂದು ವೇಳೆ ರಷ್ಯಾಕ್ಕೆ ಅವರು ಹೋದರೆ, ನನ್ನ ಮಕ್ಕಳನ್ನು ಭೇಟಿ ಮಾಡುವುದು ನನಗೆ ಕಷ್ಟವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.