ಉತ್ತರ ಪ್ರದೇಶ: 'ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ' ಎಂದ ದಿಯೋಬಂದ್ ಇನ್ಸ್‌ಪೆಕ್ಟರ್ ಹುದ್ದೆಯಿಂದ ಔಟ್ ಹಾಗೂ ಶಿಸ್ತು ಕ್ರಮ
Screengrab : X
ಸಹರಾನ್ಪುರ : 'ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ'ಎಂಬ ಹೇಳಿಕೆಯ ವೀಡಿಯೊ ವೈರಲ್ ಬಳಿಕ ಸಹರಾನ್‌ಪುರದ ದಿಯೋಬಂದ್ ಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತು ಕ್ರಮಗೈಗೊಳ್ಳಲಾಗಿದೆ ಎಂದು news18.com ವರದಿ ಮಾಡಿದೆ.
ದಿಲ್ಲಿ ಸ್ಫೋಟದ ನಂತರ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಇನ್ಸ್ ಪೆಕ್ಟರ್ ನರೇಂದ್ರ ಕುಮಾರ್ ಶರ್ಮಾ ಮಂಗಳವಾರ ದಿಯೋಬಂದ್ ಪೊಲೀಸ್ ಠಾಣೆಯಲ್ಲಿ ಸಭೆ ಕರೆದಿದ್ದರು.
ಸಭೆಯಲ್ಲಿ ಮಾತನಾಡಿದ ಇನ್ಸ್ ಪೆಕ್ಟರ್ ನರೇಂದ್ರ ಕುಮಾರ್ ಶರ್ಮಾ, ಜನರು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪುದಾರಿಗೆಳೆಯುವ ಸಂದೇಶಗಳನ್ನು ಜನರು ನಂಬಬಾರದು. ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದು ಭಾವಿಸುವುದು ತಪ್ಪು. ಎಲ್ಲಾ ಧರ್ಮಗಳಲ್ಲಿಯೂ ಅಂತಹವರು ಕಂಡು ಬರುತ್ತಾರೆ ಎಂದು ಹೇಳಿದರು. ಅವರ ಹೇಳಿಕೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
"ಈ ಕುರ್ಚಿ ನನ್ನ ತಾಯಿಯಂತೆ, ತಪ್ಪು ಮಾಡುವವರಿಗೆ ಯಾವುದೇ ಧರ್ಮವಿಲ್ಲ. ನಕ್ಸಲರು ಹಿಂದೂ ಸಮುದಾಯದಲ್ಲೂ ಇದ್ದಾರೆ. ನೌಕಾಪಡೆಯಲ್ಲಿ ಅನೇಕ ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. ಸೈನ್ಯದಲ್ಲೂ ಹಲವರನ್ನು ಬಂಧಿಸಲಾಗಿದೆ. ಹಲವು ಹಿಂದೂ ಭಯೋತ್ಪಾದಕರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದು ಹೇಳುವುದು ತಪ್ಪು. ಯಾವುದೇ ಧರ್ಮಗ್ರಂಥವು ಇತರರಿಗೆ ಹಾನಿ ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ. 34 ವರ್ಷಗಳ ಕಾಲ ತಾರತಮ್ಯವಿಲ್ಲದೆ ಕೆಲಸ ಮಾಡಿದ್ದೇನೆ” ಎಂದು ನರೇಂದ್ರ ಕುಮಾರ್ ಹೇಳಿದ್ದರು.
ನನ್ನ 34 ವರ್ಷಗಳ ಸೇವೆಯಲ್ಲಿ, ಒಬ್ಬ ಮುಸ್ಲಿಂ ಕೂಡ ನಾನು ಧರ್ಮದ ಆಧಾರದ ಮೇಲೆ ಪಕ್ಷಪಾತದಿಂದ ನಡೆದುಕೊಂಡಿದ್ದೇನೆ ಎಂದು ಹೇಳಿದರೆ ನಾನು ರಾಜೀನಾಮೆ ನೀಡಿ ನನ್ನ ಕೆಲಸದಿಂದ ಹೊರನಡೆಯುತ್ತೇನೆ. ಹಣಕ್ಕಾಗಿ ಅಲ್ಲ, ಬದಲಾಗಿ ವಿದ್ಯಾರ್ಥಿಯಾಗಿದ್ದಾಗ ಕಂಡ ವ್ಯವಸ್ಥೆಯನ್ನು ಸುಧಾರಿಸಲು ಬಯಸಿದ್ದರಿಂದ ಪೊಲೀಸ್ ಇಲಾಖೆಗೆ ಸೇರಿದೆ. ಠಾಣೆಯೊಳಗೆ ಬಡವರು ಮತ್ತು ಮಧ್ಯವರ್ತಿಗಳ ಶೋಷಣೆ ನಡೆಯುತ್ತಿರುವುದನ್ನು ನೆನಪಿಸಿಕೊಂಡ ಅವರು, ಇದು ಇಲಾಖೆಯಲ್ಲಿ ಸೇವೆ ಮಾಡುವಂತೆ ನನ್ನನ್ನು ಪ್ರೇರೇಪಿಸಿತು ಎಂದು ಹೇಳಿದರು