×
Ad

ದ್ವೇಷ ಭಾಷಣ ಆರೋಪ | Assam ಸಿಎಂ ವಿರುದ್ಧ ಎಫ್ಐಆರ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

► ಹೈಕೋರ್ಟ್ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚನೆ ►‘ಹೈಕೋರ್ಟ್ ಅಧಿಕಾರವನ್ನು ದುರ್ಬಲಗೊಳಿಸಬೇಡಿ’ ಎಂದ ಸಿಜೆಐ ಸೂರ್ಯ ಕಾಂತ್

Update: 2026-02-16 15:00 IST

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Photo: PTI)

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದ್ವೇಷ ಭಾಷಣದ ಆರೋಪದ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ಮೊದಲು ಗುವಾಹಟಿ ಹೈಕೋರ್ಟ್ ಮೊರೆ ಹೋಗಬೇಕೆಂದು ಸೂಚಿಸಿದೆ. ಜೊತೆಗೆ, ವಿಚಾರಣೆಯನ್ನು ತ್ವರಿತಗೊಳಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದೆ.

ಪೀಠವು ಒಟ್ಟು ಮೂರು ಅರ್ಜಿಗಳನ್ನು ಪರಿಶೀಲಿಸಿತು. ಎರಡು ಅರ್ಜಿಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ ನಾಯಕಿ ಆನಿ ರಾಜಾ ಸಲ್ಲಿಸಿದ್ದರೆ, ಮೂರನೇ ಅರ್ಜಿಯನ್ನು ನಾಲ್ವರು ಅಸ್ಸಾಮಿನ ವ್ಯಕ್ತಿಗಳು ಸಲ್ಲಿಸಿದ್ದರು. ಸಿಪಿಐ(ಎಂ) ಹಾಗೂ ಆನಿ ರಾಜಾ ಅವರು ಶರ್ಮಾ ಅವರ ‘ಪಾಯಿಂಟ್ ಬ್ಲಾಂಕ್’ ವೀಡಿಯೊ ಸೇರಿದಂತೆ ಹಿಂದಿನ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರಿದ್ದರು.

ಇತ್ತೀಚೆಗೆ, ಬಿಜೆಪಿಯ ಅಸ್ಸಾಂನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮುಖ್ಯಮಂತ್ರಿ ಮುಸ್ಲಿಂ ಸಮುದಾಯದವರಂತೆ ಕಾಣುವ ವ್ಯಕ್ತಿಗಳ ಮೇಲೆ ಗುಂಡು ಹಾರಿಸುವ ವೀಡಿಯೊ ಪೋಸ್ಟ್ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾದ ಬಳಿಕ ಅದನ್ನು ಅಳಿಸಲಾಯಿತು.

ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ, ಹಿಮಂತ ಬಿಸ್ವ ಶರ್ಮಾ ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅಪರಾಧಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಎಸ್ಐಟಿ ರಚಿಸುವಂತೆ ಕೋರಲಾಗಿತ್ತು. ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು ಮೊದಲ ಹಂತದಲ್ಲೇ ಹೈಕೋರ್ಟ್ ಸಂಪರ್ಕಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ವಿಧಿ 32 ಅನ್ನು ನೇರವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದಿತು. ವಿಚಾರಣೆ ವೇಳೆ ಸಿಜೆಐ ಸೂರ್ಯ ಕಾಂತ್, “ಹೈಕೋರ್ಟ್ಗಳ ಅಧಿಕಾರವನ್ನು ದುರ್ಬಲಗೊಳಿಸಬೇಡಿ. ಪ್ರತಿಯೊಂದು ವಿಷಯವೂ ನೇರವಾಗಿ ಸುಪ್ರೀಂ ಕೋರ್ಟ್ ಗೆ ಬರಬಾರದು” ಎಂದು ಹೇಳಿದರು.

ಇದಕ್ಕೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯಿಸಿ, “ಇದು ಕೇವಲ ಅಪರಾಧಗಳ ವಿಷಯವಲ್ಲ; ಅಧಿಕಾರದ ಪ್ರಮಾಣ ವಚನ ಉಲ್ಲಂಘನೆಯೂ ಸೇರಿದೆ. ಆದ್ದರಿಂದ 32ನೇ ವಿಧಿಯ ಅನ್ವಯ ಸೂಕ್ತ ಪ್ರಕರಣ” ಎಂದು ವಾದ ಮಂಡಿಸಿದರು.

ಸಿಜೆಐ ತಕ್ಷಣ ಪ್ರತಿಕ್ರಿಯಿಸಿ, “ಹೈಕೋರ್ಟ್ ನ್ಯಾಯಾಧೀಶರ ಮನೋಸ್ಥೈರ್ಯ ಕುಗ್ಗಿಸಬೇಡಿ. ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಇರಲಿ” ಎಂದು ಉಲ್ಲೇಖಸಿದರು.

ಅರ್ಜಿಯನ್ನು ವಿಲೇವಾರಿ ಮಾಡುವ ವೇಳೆ ಪೀಠ ಆದೇಶದಲ್ಲಿ, “ಈ ಸಮಸ್ಯೆಗಳನ್ನು ಹೈಕೋರ್ಟ್ ಪರಿಣಾಮಕಾರಿಯಾಗಿ ನಿರ್ಣಯಿಸಬಲ್ಲದು. ಇಲ್ಲಿ ಇದನ್ನು ವಿಚಾರಣೆಗೆ ಏಕೆ ಪರಿಗಣಿಸಬೇಕು ಎಂದು ನಮಗೆ ಗೊತ್ತಾಗುತ್ತಿಲ್ಲ. ಅರ್ಜಿದಾರರು ಹೈಕೋರ್ಟ್ ಗೆ ಮೊರೆ ಹೋಗಲಿ. ತ್ವರಿತ ವಿಚಾರಣೆಗೆ ಮುಖ್ಯ ನ್ಯಾಯಾಧೀಶರನ್ನು ನಾವು ವಿನಂತಿಸುತ್ತೇವೆ” ಎಂದು ದಾಖಲಿಸಿತು.

ವಿಚಾರಣೆಯ ಆರಂಭದಲ್ಲೇ ಸಿಜೆಐ ಸೂರ್ಯ ಕಾಂತ್, “ಚುನಾವಣೆಗಳು ಬಂದಾಗ ಈ ನ್ಯಾಯಾಲಯ ರಾಜಕೀಯ ಯುದ್ಧಭೂಮಿಯಾಗುತ್ತದೆ. ರಾಜಕೀಯ ಪಕ್ಷಗಳು ಪರಸ್ಪರ ಗೌರವ ಮತ್ತು ಸ್ವಯಂ ಸಂಯಮದೊಂದಿಗೆ ಚುನಾವಣೆಗಳನ್ನು ಎದುರಿಸಬೇಕು”, ಎಂದು ಮನವಿ ಮಾಡಿದರು.

ಅರ್ಜಿದಾರರ ಪರವಾಗಿ ಸಿಂಘ್ವಿ ಅವರು, ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಎಸ್ಐಟಿ ತನಿಖೆ ಕೋರಿರುವುದರಿಂದ ಹೈಕೋರ್ಟ್ ಸೂಕ್ತ ವೇದಿಕೆ ಅಲ್ಲದಿರಬಹುದು ಎಂದು ವಾದಿಸಿದರು. ಶರ್ಮಾ ಅವರ ಕೆಲವು ಹೇಳಿಕೆಗಳನ್ನು ಉಲ್ಲೇಖಿಸಿ, “ದೇಶದ ಸಾಂವಿಧಾನಿಕ ಮತ್ತು ಸಾಮಾಜಿಕ ರಚನೆಗೆ ಅಪಾಯ ಎಂದಾದರೆ ಸಂವಿಧಾನದ 32ನೇ ವಿಧಿ ಅನ್ವಯಿಸಲೇಬೇಕು” ಎಂದು ಒತ್ತಾಯಿಸಿದರು.

ಇದಕ್ಕೆ ಸಿಜೆಐ, “ಅರ್ಜಿದಾರರು ಕೇಳಿರುವಂತೆ ಗುವಾಹಟಿ ಹೈಕೋರ್ಟ್ ಏಕೆ ಆದೇಶ ನೀಡಬಾರದು?” ಎಂದು ಪ್ರಶ್ನಿಸಿದರು. ಸಿಂಘ್ವಿ ಅವರು ಈ ಪ್ರಕರಣದಲ್ಲಿ ಬೇರೆ ಹೈಕೋರ್ಟ್ ಸಂಪರ್ಕಿಸಲು ಅವಕಾಶ ನೀಡಬೇಕು ಎಂದಾಗ, ಸಿಜೆಐ ಅಸಮಾಧಾನ ವ್ಯಕ್ತಪಡಿಸಿ, “ಇದು ತುಂಬಾ ದುರದೃಷ್ಟಕರವಾದ ಬೇಡಿಕೆ; ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ಪ್ರತಿಯೊಂದು ವಿಷಯವೂ ಸುಪ್ರೀಂ ಕೋರ್ಟ್ಗೆ ಬರಬಾರದು. ಹೈಕೋರ್ಟ್ಗಳ ನೈತಿಕತೆಯನ್ನು ಕುಗ್ಗಿಸುವ ಉದ್ದೇಶಪೂರ್ವಕ ಕ್ರಮಗಳು ನಡೆಯುತ್ತಿವೆ” ಎಂದು ಸಿಜೆಐ ಅಭಿಪ್ರಾಯಪಟ್ಟರು.

ಅರ್ಜಿದಾರರ ಪರ ವಕೀಲ ನಿಝಾಮ್ ಪಾಷಾ, ಹೈಕೋರ್ಟ್ ಅಸ್ಸಾಂ ಹೊರಗಿನ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ರಚಿಸಬೇಕಾಗಬಹುದು. ನಾಲ್ವರು ಅಸ್ಸಾಮ್ ನ ವ್ಯಕ್ತಿಗಳ ಪರವಾಗಿ ಹಿರಿಯ ವಕೀಲ ಚಂದರ್ ಉದಯ್ ಸಿಂಗ್, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರೂ ಕ್ರಮವಾಗಿಲ್ಲ ಎಂದು ವಾದ ಮಂಡಿಸಿದರು.

ನಾಲ್ವರು ಅಸ್ಸಾಮೀ ವ್ಯಕ್ತಿಗಳು ಸಲ್ಲಿಸಿದ ಅರ್ಜಿಯಲ್ಲಿ, ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಶರ್ಮಾ ಮಾಡಿದ ದ್ವೇಷ ಭಾಷಣಗಳ ಸರಣಿ ಬಗ್ಗೆ ತುರ್ತು ಹಸ್ತಕ್ಷೇಪ ಕೋರಿ ಮನವಿ ಮಾಡಲಾಗಿತ್ತು. “‘ಮಿಯಾ’, ‘ಬಾಂಗ್ಲಾದೇಶಿ’ ಎಂಬ ಪದಗಳನ್ನು ಅವಹೇಳನಕಾರಿ ನಿಂದನೆಗಳಾಗಿ ಬಳಸಲಾಗಿದೆ; ಸಮುದಾಯದ ಸಾಮಾಜಿಕ–ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅರ್ಜಿಯನ್ನು ಸಲ್ಲಿಸಿದವರಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಹಿರೇನ್ ಗೋಹೈನ್, ಅಸ್ಸಾಂ ಪೊಲೀಸ್ ನ ಮಾಜಿ ಮಹಾನಿರ್ದೇಶಕ ಹರೇಕೃಷ್ಣ ದೇಕಾ, ‘ಈಶಾನ್ಯ ನೌ’ ಪತ್ರಿಕೆಯ ಪ್ರಧಾನ ಸಂಪಾದಕ ಪರೇಶ್ ಚಂದ್ರ ಮಾಲಕರ್ ಹಾಗೂ ಹಿರಿಯ ವಕೀಲ ಸಂತನು ಬೋರ್ಥಕೂರ್ ಸೇರಿದ್ದಾರೆ. ಮುಖ್ಯಮಂತ್ರಿಗಳು ಬಂಗಾಳಿ ಮೂಲದ ಮುಸ್ಲಿಮರ ವಿರುದ್ಧ ತಾರತಮ್ಯ ಮತ್ತು ಹಿಂಸಾಚಾರ ಪ್ರಚೋದಿಸುವ ಹೇಳಿಕೆಗಳನ್ನು ಪದೇ ಪದೇ ನೀಡಿದ್ದಾರೆ ಎಂದು ಅವರು ವಾದಿಸಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ‘ಮಿಯಾ ಮುಸ್ಲಿಮರು’, ‘ಪ್ರವಾಹ ಜಿಹಾದ್’ ಕುರಿತ ಹೇಳಿಕೆಗಳನ್ನು ಉಲ್ಲೇಖಿಸಿ ಸಾಂವಿಧಾನಿಕ ಹುದ್ದೆಯಲ್ಲಿರುವವರಿಂದ ವಿಭಜನಕಾರಿ ಕಮೆಂಟ್ಗಳನ್ನು ತಡೆಯುವಂತೆ 12 ಮಂದಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಜಮಿಯತ್ ಉಲೇಮಾ–ಇ–ಹಿಂದ್ ಕೂಡ ಇದೇ ಬೇಡಿಕೆ ಮುಂದಿರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News