ಜಮ್ಮುಕಾಶ್ಮೀರ | ವೈಷ್ಣೋದೇವಿ ದೇವಾಲಯದ ಬಳಿ ಭೂಕುಸಿತ : ಕನಿಷ್ಠ 31 ಜನರು ಮೃತ್ಯು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
Photo: PTI
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 31 ಜನರು ಮೃತಪಟ್ಟಿದ್ದು, 23 ಜನರು ಗಾಯಗೊಂಡಿದ್ದಾರೆ.
ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯ ಇಂದ್ರಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಹೆಚ್ಚಿನ ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ.
ಭಾರಿ ಮಳೆಯಿಂದಾಗಿ ವೈಷ್ಣೋದೇವಿ ದೇಗುಲದ ಬಳಿ ಭೂಕುಸಿತ ಸಂಭವಿಸಿ 31 ಜನರು ಪ್ರಾಣ ಕಳೆದುಕೊಂಡಿರುವುದನ್ನು ಎಸ್ಎಸ್‌ಪಿ ರಿಯಾಸಿ ಪರಮವೀರ್ ಸಿಂಗ್ ದೃಢಪಡಿಸಿದ್ದಾರೆ.
ಭಾರೀ ಮಳೆಗೆ ಭೂಕುಸಿತದಿಂದ ಬಂಡೆಗಳು ಬೆಟ್ಟದ ಇಳಿಜಾರಿನಲ್ಲಿ ಕುಸಿದು ಬಿದ್ದು ಹಲವಾರು ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ನಿರಂತರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಜಮ್ಮುವಿನಲ್ಲಿ, ಸೇತುವೆಗಳು ಕುಸಿದು ಬಿದ್ದಿದ್ದು, ವಿದ್ಯುತ್ ತಂತಿಗಳು ಮತ್ತು ಮೊಬೈಲ್ ಟವರ್‌ಗಳು ತೀವ್ರವಾಗಿ ಹಾನಿಗೊಳಗಾಗಿವೆ.