×
Ad

ಕೇರಳ | ಬಾಲ್ಯದಲ್ಲಿ ಆರೆಸ್ಸೆಸ್ ಕ್ಯಾಂಪ್ ನಲ್ಲಿ ಲೈಂಗಿಕ ದೌರ್ಜನ್ಯವಾಗಿತ್ತು ಎಂದು ಆರೋಪಿಸಿ ಖಿನ್ನತೆಗೊಳಗಾಗಿದ್ದ ಯುವಕ ಆತ್ಮಹತ್ಯೆ

Update: 2025-10-11 23:55 IST

Photo| Instagram/ anantwo_aji

ಕೊಟ್ಟಾಯಂ, ಅ.11: ಕೇರಳದ ಕೊಟ್ಟಾಯಂ ಜಿಲ್ಲೆಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಸಾವಿನ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಬರೆದ ಪೋಸ್ಟ್‌ ಒಂದು ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೃತ ಯುವಕ, ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಕ್ಯಾಂಪ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆಂದು ಆರೋಪಿಸಿರುವುದರಿಂದ ಪ್ರಕರಣವು ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ.

ಎಲಿಕುಲಂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂಚಿಮಲದ ನಿವಾಸಿ ಆನಂದು ಅಜಿ (26) ಗುರುವಾರ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣದ ಸಮೀಪದ ಪ್ರವಾಸಿ ಗೃಹದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶುಕ್ರವಾರ ಸಂಜೆ ಅವರ ಅಂತ್ಯಕ್ರಿಯೆ ಸ್ವಗೃಹದಲ್ಲಿ ನೆರವೇರಿತು.

ಆನಂದು ಅವರ ಸಾವಿನ ಕೆಲ ಗಂಟೆಗಳ ಬಳಿಕ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ಅವರು ಬಾಲ್ಯದಲ್ಲಿ ಮತ್ತು ಆರೆಸ್ಸೆಸ್ ಕ್ಯಾಂಪ್‌ಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.

ತಂಪನೂರು ಪೊಲೀಸರು ಈ ಪೋಸ್ಟ್ ಸಾವಿನ ಮೊದಲೇ ರಚಿಸಲಾಗಿದ್ದು, ಸಾವಿನ ನಂತರ ಪ್ರಕಟವಾಗುವಂತೆ ಮೊದಲೇ ಸೆಟ್ ಮಾಡಲಾಗಿತ್ತು ಎಂದು ದೃಢಪಡಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಪೋಸ್ಟ್‌ ಸೆಪ್ಟೆಂಬರ್‌ 8ರಂದು ರಚಿಸಲ್ಪಟ್ಟು, ಅಕ್ಟೋಬರ್‌ 3 ಮತ್ತು 4ರಂದು ಪರಿಷ್ಕರಿಸಲ್ಪಟ್ಟಿತ್ತು.

“ಮೂರರಿಂದ ನಾಲ್ಕು ವರ್ಷದ ಬಾಲಕನಾಗಿದ್ದಾಗ ನನ್ನ ಕುಟುಂಬದ ಪರಿಚಯದ ವ್ಯಕ್ತಿಯೊಬ್ಬರು ಹಾಗೂ ನಂತರ ಆರೆಸ್ಸೆಸ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದರು,” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ಆರೆಸ್ಸೆಸ್ ಶಿಬಿರಗಳಲ್ಲಿ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯ ವ್ಯಾಪಕವಾಗಿದೆ. ಈ ಬಗ್ಗೆ ಪುರಾವೆಗಳಿಲ್ಲದ ಕಾರಣ ಅನೇಕರಿಗೆ ನಂಬಿಕೆ ಮೂಡದಿರಬಹುದು,” ಎಂದು ಅವರು ಉಲ್ಲೇಖಿಸಿದ್ದು, ದೀರ್ಘಕಾಲದ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದೇನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಆನಂದು ಅವರ ಹೇಳಿಕೆ ವೈರಲ್ ಆದ ಬಳಿಕ ಸಿಪಿಐ(ಎಂ) ಮತ್ತು ಅದರ ಯುವ ಘಟಕ ಡಿವೈಎಫ್‌ಐ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿವೆ.

“ಆನಂದು ಅವರ ಹೇಳಿಕೆ ಆರೆಸ್ಸೆಸ್‌ನ ಅಮಾನವೀಯ ಮುಖವನ್ನು ಬಯಲಿಗೆಳೆಯುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು,” ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ವಿ.ಕೆ. ಸನೋಜ್ ಹೇಳಿದ್ದಾರೆ.

“ಆನಂದು ಬರೆದಿರುವುದರಿಂದ, ಆರೆಸ್ಸೆಸ್ ನಮ್ಮ ಸಮಾಜದಲ್ಲಿ ಎಷ್ಟು ಅಪಾಯಕಾರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಇಂತಹ ಶಾಖೆಗಳಿಂದ ಮಕ್ಕಳನ್ನು ದೂರವಿಡಬೇಕು,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಆನಂದು ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಮ್ಯೂಸಿಯಂ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ದೂರು ಆಧರಿಸಿ ಮೊಬೈಲ್ ಸಿಗ್ನಲ್ ಟ್ರ್ಯಾಕ್‌ ಮಾಡಲಾಯಿತು. ಸಂಗೀತ ಪ್ರವಾಸಿ ಗೃಹದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಆನಂಧು ಅವರ ತಂದೆ ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ಬಳಿಕ ಅವರು ಭಾವನಾತ್ಮಕವಾಗಿ ತೀವ್ರವಾಗಿ ಕುಗ್ಗಿದ್ದರು. ಕುಟುಂಬವು ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಿರಲಿಲ್ಲ," ಎಂದು ಎಲಿಕುಲಂ ಪಂಚಾಯತ್ ಅಧ್ಯಕ್ಷ ಜಿಮ್ಮಿ ಜಾಕೋಬ್ ಹೇಳಿದ್ದಾರೆ.

ಆರೆಸ್ಸೆಸ್ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಲಾಗಿದ್ದು, ಪೋಸ್ಟ್‌ನಲ್ಲಿನ ಆರೋಪಗಳು, ಸಾವಿನ ಸಂದರ್ಭ ಹಾಗೂ ಪುರಾವೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದು ಅವರು ತಾಯಿ ಜುಜು ಹಾಗೂ ಸಹೋದರಿ ಅಂಜಿತಾ ಅವರನ್ನು ಅಗಲಿದ್ದಾರೆ.

ಸೌಜನ್ಯ: thesouthfirst.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News