ಚಿಹ್ನೆ ಬಳಸಲು ಅನುಮತಿ ಕೋರಿ ಶಿವಸೇನೆ (ಯುಬಿಟಿ) ಬಣ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್
ಉದ್ಧವ್ ಠಾಕ್ರೆ | PC : PTI
ಹೊಸದಿಲ್ಲಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘‘ಶಿವಸೇನೆ’’ ಹೆಸರು ಮತ್ತು ಅದರ ‘‘ಬಿಲ್ಲು ಮತ್ತು ಬಾಣ’’ ಚಿಹ್ನೆಯನ್ನು ಬಳಸಲು ಅನುಮತಿ ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಚುನಾವಣೆ ಇನ್ನೂ ಘೋಷಣೆಯಾಗಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎಮ್.ಎಮ್. ಸುಂದರೇಶ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು, ಅರ್ಜಿಯ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಿತು. ‘‘ಈಗ ತುರ್ತು ಏನಿದೆ? ಒಂದು ವೇಳೆ ಚುನಾವಣೆ ಘೋಷಣೆಯಾದರೂ ಬಾಕಿಯಾಗಿರುವ ಅರ್ಜಿಗೆ ಸಂಬಂಧಿಸಿ ನೀವು ನಿರ್ದೇಶನಗಳನ್ನು ಕೋರಬಹುದು’’ ಎಂದು ನ್ಯಾಯಾಲಯ ಹೇಳಿತು.
ಏಕನಾಥ ಶಿಂದೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂಬುದಾಗಿ ಮಾನ್ಯಮಾಡಿ ಭಾರತೀಯ ಚುನಾವಣಾ ಆಯೋಗವು 2023 ಫೆಬ್ರವರಿ 17ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಾಗಿದೆ. ಅದರ ಆಧಾರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣವು ನೂತನ ಅರ್ಜಿಯನ್ನು ಸಲ್ಲಿಸಿದೆ.
ಶಿವಸೇನೆ (ಉದ್ಧವ್ ಠಾಕ್ರೆ) ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ದೇವದತ್ತ ಕಾಮತ್, 27 ಮುನಿಸಿಪಲ್ ಕಾರ್ಪೊರೇಶನ್‌ಗಳು, 232 ಮುನಿಸಿಪಲ್ ಕೌನ್ಸಿಲ್ ಗಳು ಮತ್ತು 125 ನಗರ ಪಂಚಾಯತ್ ಗಳ ಚುನಾವಣೆಗೆ ಶೀಘ್ರವೇ ಅಧಿಸೂಚನೆ ಹೊರಡಲಿದ್ದು, ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಹೇಳಿದರು.