ಆಪರೇಷನ್ ಸಿಂಧೂರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು : ಶಿಂಧೆ ನೇತೃತ್ವದ ಶಿವಸೇನೆ ಒತ್ತಾಯ
Photo: Screen grab X/@PTI
ಮುಂಬೈ: ಭಾರತೀಯ ಸೇನೆಯ ಬಗ್ಗೆ ತಪ್ಪು ಮಾಹಿತಿ ಹರಡಿದ ಮತ್ತು ಆಪರೇಷನ್ ಸಿಂಧೂರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ ಆರೋಪದ ಮೇಲೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಸಂಸದರಾದ ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್ ವಿರುದ್ಧ ತನಿಖೆ ನಡೆಸಬೇಕು ಮತ್ತು ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕು ಎಂದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ರಾಜ್ಯಸಭಾ ಸಂಸದ ಸಂಜಯ್ ರಾವತ್ ಮತ್ತು ಲೋಕಸಭಾ ಸಂಸದ ಅರವಿಂದ್ ಸಾವಂತ್ ಶಿವಸೇನೆ (ಯುಬಿಟಿ)ಯ ಮುಖ್ಯ ವಕ್ತಾರರು ಮತ್ತು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರು.
ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್ ಅವರ ಬಾಯಿಯಿಂದ ಪಾಕಿಸ್ತಾನದ ಭಾಷೆ ಬರುತ್ತಿದೆ. ನಮ್ಮ ಸಶಸ್ತ್ರ ಪಡೆಗಳ ಕ್ರಮಗಳನ್ನು ಪ್ರಶ್ನಿಸುವ ಮೂಲಕ ಅವರು ಪಾಕಿಸ್ತಾನದ ಸೇನೆಯ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ನರೇಶ್ ಮಾಸ್ಕೆ ಹೇಳಿದರು.
ಕಳೆದ ಎರಡು ದಿನಗಳಿಂದ ಭಾರತೀಯ ಸೇನೆಯ ಕಾರ್ಯಾಚರಣೆಗಳ ಬಗ್ಗೆ ಇಬ್ಬರು ಸಂಸದರು ಅನುಮಾನದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. "ಗಿರೆ ತೋ ಭಿ ತಂಗ್ ಉಪರ್"(‘gire toh bhi tang upar) ಎಂದು ಅರವಿಂದ್ ಸಾವಂತ್ ಯಾರನ್ನು ಉಲ್ಲೇಖಿಸುತ್ತಿದ್ದಾರೆ? ನಮ್ಮ ವಾಯುಪಡೆಯ ಪೈಲಟ್‌ಗಳು ಜಾಗರೂಕರಾಗಿದ್ದಾರೆ ಮತ್ತು ಆದೇಶಗಳಿಗಾಗಿ ಕಾಯುತ್ತಿದ್ದಾರೆ. ಅಂತಹ ಹೇಳಿಕೆ ಸೈನಿಕರಿಗೆ ಅವಮಾನಿಸುತ್ತದೆ ಎಂದು ಹೇಳಿದರು.
ಭಾರತೀಯ ಸೇನೆಯು ದೇಶಕ್ಕೆ ಸೇರಿದೆ ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಅಲ್ಲ. ಅದು ಪ್ರತಿಯೋರ್ವ ನಾಗರಿಕನ ಸಂಪೂರ್ಣ ನಂಬಿಕೆಗೆ ಅರ್ಹವಾಗಿದೆ. ಸೇನೆಯು ಫೋಟೋ ಮತ್ತು ವೀಡಿಯೊ ಪುರಾವೆಗಳನ್ನು ಪ್ರಸ್ತುತಪಡಿಸಿದಾಗಲೂ, ನೀವು ಇನ್ನೂ ಅವರನ್ನು ಪ್ರಶ್ನಿಸಲು ಮತ್ತು ಅನುಮಾನವನ್ನು ಹರಡುತ್ತಿದ್ದರೆ ಅದು ಕೇವಲ ಅವಮಾನ ಮಾತ್ರವಲ್ಲ ದೇಶದ್ರೋಹವಾಗಿದೆ ಎಂದು ಹೇಳಿದರು.