×
Ad

ಇಂದೋರ್ | ಬಿಜೆಪಿ ಶಾಸಕಿಯ ಮಗನ ಎಚ್ಚರಿಕೆಯಿಂದಾಗಿ ಮುಸ್ಲಿಮ್ ಕಾರ್ಮಿಕರಿಗೆ ಸಂಕಷ್ಟ; ಪೊಲೀಸರ ಮೌನ

ಅಂಗಡಿಗಳು ಬಂದ್, ಕನಿಷ್ಠ 50 ಜನರಿಗೆ ಉದ್ಯೋಗ ನಷ್ಟ!

Update: 2025-09-25 18:45 IST

PC - newslaundry

ಇಂದೋರ್(ಮಧ್ಯಪ್ರದೇಶ),ಸೆ.25: ರಾಜಕಾರಣಿಯೋರ್ವ ತಮ್ಮ ಎಲ್ಲ ಹಿಂದು ಉದ್ಯೋಗಿಗಳನ್ನು ಒಂದು ತಿಂಗಳಲ್ಲಿ ವಜಾಗೊಳಿಸುವಂತೆ ನಿರ್ದಿಷ್ಟ ಪ್ರದೇಶದಲ್ಲಿಯ ಅಂಗಡಿಕಾರರಿಗೆ ಹೇಳಿದರೆ ಏನಾಗುತ್ತದೆ? ಟಿವಿ ಸ್ಟುಡಿಯೋಗಳಲ್ಲಿ ಆಕ್ರೋಶ ಭುಗಿಲೇಳುತ್ತದೆ, ಎಫ್‌ಆರ್‌ಗಳು ದಾಖಲಾಗುತ್ತವೆ ಮತ್ತು ಬುಲ್ಡೋಝರ್‌ಗಳೂ ಸುಮ್ಮನಿರುವುದಿಲ್ಲ. ಆದರೆ ಇಂತಹದೊಂದು ಬೆದರಿಕೆ ಇಂದೋರ್ ಮಾರುಕಟ್ಟೆಯಲ್ಲಿನ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾಗ ಪೊಲೀಸರು ಅಥವಾ ಆಡಳಿತದಿಂದ ಯಾವುದೇ ಹಸ್ತಕ್ಷೇಪ ನಡೆದಿಲ್ಲ.

ಒಂದು ತಿಂಗಳ ಹಿಂದೆ ಬಿಜೆಪಿಯ ಇಂದೋರ್ ಉಪಾಧ್ಯಕ್ಷ ಹಾಗೂ ಸ್ಥಳೀಯ ಶಾಸಕಿ ಮಾಲಿನಿ ಗೌಡ್ ಅವರ ಪುತ್ರ ಏಕಲವ್ಯ ಸಿಂಗ್ ಗೌಡ್ ತಮ್ಮ ಎಲ್ಲ ಮುಸ್ಲಿಮ್ ಉದ್ಯೋಗಿಗಳನ್ನು ಸೆ.25ರೊಳಗೆ ಕೆಲಸದಿಂದ ವಜಾಗೊಳಿಸಬೇಕು ಎಂದು ನಗರದ ಬಟ್ಟೆಗಳ ಮಾರುಕಟ್ಟೆ ಶೀತ್ಲಾ ಮಾತಾ ಬಝಾರ್‌ ನಲ್ಲಿಯ ವ್ಯಾಪಾರಿಗಳಿಗೆ ಅಂತಿಮ ಎಚ್ಚರಿಕೆಯನ್ನು ನೀಡಿದ್ದ. ತನ್ನ ‘ಮನವಿ’ಯನ್ನು ತಿಳಿಸಲು ಅವನು ಮಾರುಕಟ್ಟೆ ವ್ಯಾಪಾರಿಗಳ ಸಂಘದೊಂದಿಗೆ ಮಾತುಕತೆಯನ್ನು ನಡೆಸಿದ್ದ.

‘ಲವ್ ಜಿಹಾದ್’ ಅನ್ನು ಎದುರಿಸಲು ಮತ್ತು ಸಂಬಂಧಗಳನ್ನು ರೂಪಿಸಿಕೊಳ್ಳಲು ಮಾರಾಟದ ವೇಳೆಯ ಸಂವಹನಗಳ ದುರ್ಬಳಕೆಯಿಂದ ಅಮಾಯಕ ಹಿಂದು ಮಹಿಳೆಯರನ್ನು ರಕ್ಷಿಸಲು ಈ ಕ್ರಮವು ಅಗತ್ಯವಾಗಿದೆ ಎಂದು ಗೌಡ್ ಪ್ರತಿಪಾದಿಸಿದ್ದಾನೆ.

ಗೌಡ್ ತನ್ನ ಎಚ್ಚರಿಕೆಯನ್ನು ಪಾಲಿಸಲು ಸೆ.25ರ ಗಡುವು ನೀಡಿದ್ದು,ಅದರ ಪರಿಣಾಮವು ಸ್ಪಷ್ಟವಾಗಿದೆ. 50ಕ್ಕೂ ಹೆಚ್ಚು ಮುಸ್ಲಿಮ್ ಉದ್ಯೋಗಿಗಳು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಸುಮಾರು 500 ಅಂಗಡಿಗಳಿರುವ ಈ ಮಾರುಕಟ್ಟೆಯಲ್ಲಿ ಕನಿಷ್ಠ ನಾಲ್ವರು ಅಂಗಡಿಕಾರರು ತಮ್ಮ ಬಾಡಿಗೆ ಮಳಿಗೆಗಳನ್ನು ಖಾಲಿ ಮಾಡಿದ್ದಾರೆ.

ವಿವಾದಗಳು ಗೌಡ್‌ ಗೆ ಹೊಸದೇನಲ್ಲ. ಆತ ಈ ಹಿಂದೆ ದೇವಸ್ಥಾನದಲ್ಲಿ ಪೋಲಿಸ್ ಕಾನ್‌ಸ್ಟೇಬಲ್ ಓರ್ವರನ್ನು ಥಳಿಸಿದ ಆರೋಪಿಯಾಗಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅವನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಾಮೆಡಿಯನ್ ಮುನಾವರ್ ಫಾರೂಕಿ ಎಂದೂ ಮಾಡಿರದ ಜೋಕ್ ಕುರಿತು ಅವರ ವಿರುದ್ಧ ದೂರು ದಾಖಲಿಸಿದ್ದವರಲ್ಲಿ ಗೌಡ್ ಕೂಡ್ ಸೇರಿದ್ದ. ಈ ದೂರಿನಿಂದಾಗಿ ಫಾರೂಕಿ ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲು ಸೇರುವಂತಾಗಿತ್ತು.

ಗೌಡ್ ಇಂತಹ ಎಚ್ಚರಿಕೆ ನೀಡಿದ್ದರೂ ಅವನ ವಿರುದ್ಧ ಪ್ರಕರಣವನ್ನೇಕೆ ದಾಖಲಿಸಿಲ್ಲ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಡಿಸಿಪಿ ಆನಂದ್ ಕಲಾದಗಿ ಅವರು, ‘ಗೌಡ್ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಮಾಧ್ಯಮ ವರದಿಗಳನ್ನು ಹೊರತುಪಡಿಸಿ ಯಾವುದೇ ವೀಡಿಯೊ ಪುರಾವೆಗಳಿಲ್ಲ. ನಾವು ಈ ವಿಷಯವನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ’ಎಂದು ಉತ್ತರಿಸಿದರು.

ಮುಸ್ಲಿಮ್ ಸೇಲ್ಸ್‌ಮನ್‌ ಗಳು ಸೆ.15ರಂದು ಇಂದೋರ್ ಪೋಲಿಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ. ರಾಜಕೀಯ ಲಾಭಕ್ಕಾಗಿ ತಮ್ಮನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಮ್ ಉದ್ಯೋಗಿಗಳು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರದೇಶವು ಗೌಡ್ ನ ತಾಯಿ ಹಾಗೂ ಬಿಜೆಪಿ ಶಾಸಕಿ ಮಾಲಿನಿ ಗೌಡ್ ಅವರ ಕ್ಷೇತ್ರದಲ್ಲಿರುವುದರಿಂದ ಪೋಲಿಸರು ಗೌಡ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಇಬ್ಬರು ವ್ಯಾಪಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.

ಶೀತ್ಲಾ ಮಾತಾ ಬಝಾರ್‌ ನಲ್ಲಿ ಸುಮಾರು 100ರಿಂದ 150 ಮುಸ್ಲಿಮರು ಸೇಲ್ಸ್‌ ಮನ್‌ ಗಳಾಗಿ ಕೆಲಸ ಮಾಡುತ್ತಿದ್ದು,10ರಿಂದ 15 ಅಂಗಡಿಗಳು ಮುಸ್ಲಿಮರಿಗೆ ಸೇರಿವೆ. ತಮ್ಮ ಜೀವನಾಧಾರವೇ ತಪ್ಪಿಹೋದರೆ ತಾವು ಬದುಕುವುದು ಹೇಗೆ ಎಂದು ಅವರು ಚಿಂತಿತರಾಗಿದ್ದಾರೆ. ಬುಧವಾರ ಮುಸ್ಲಿಮ್ ಸೇಲ್ಸ್‌ ಮನ್‌ ಗಳು ಮೌನ ಪ್ರತಿಭಟನೆಯನ್ನೂ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News