‘ತಾಯ್ನಾಡಿಗೆ ದೂರದಲ್ಲಿದ್ದೀರಿ, ಆದರೆ ಭಾರತೀಯ ಹೃದಯಗಳಿಗೆ ತೀರಾ ಸನಿಹದಲ್ಲಿದ್ದೀರಿ’: ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
PC ; ANI
ಹೊಸದಿಲ್ಲಿ: ಆ್ಯಕ್ಸಿಯಂ-4 ಮಿಶನ್‌ನಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂವಹನ ನಡೆಸಿದರು. ಈ ಮಹತ್ತರ ಸಾಧನೆಗಾಗಿ 140 ಕೋಟಿ ಭಾರತೀಯರ ಪರವಾಗಿ ಶುಭಾಂಶು ಶುಕ್ಲಾ ಅವರಿಗೆ ಪ್ರಧಾನಿ ಅಭಿನಂದನೆಗಳನ್ನು ಸಲ್ಲಿಸಿದರು. ‘‘ನೀವು ತಾಯ್ನಾಡಿನಿಂದ ತುಂಬಾ ದೂರದಲ್ಲಿದ್ದೀರಿ. ಆದರೆ ಭಾರತೀಯರ ಹೃದಯಕ್ಕೆ ಅತ್ಯಂತ ಸನಿಹದಲ್ಲಿದ್ದೀರಿ’’ ಎಂದು ಮೋದಿ ಹೇಳಿದರು. ಇದಕ್ಕೆ ಪ್ರತಿಯಾಗಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಶುಕ್ಲಾ ಅವರು, ಪ್ರಧಾನಿಯ ನಾಯಕತ್ವವು ಭಾರತೀಯರಿಗೆ ಅವರ ಕನಸುಗಳನ್ನು ಈಡೇರಿಸಲು ಅಸಂಖ್ಯಾತ ಅವಕಾಶಗಳನ್ನು ತೆರೆದಿಟ್ಟಿದೆ ಎಂದರು.
‘‘ ಇಂದು ನೀವು ತಾಯ್ನಾಡಿನಿಂದ ತುಂಬಾ ದೂರದಲ್ಲಿದ್ದೀರಿ. ಆದರೆ ನೀವು ಭಾರತೀಯರ ಹೃದಯಗಳಿಗೆ ತುಂಬಾ ಹತ್ತಿರವಾಗಿದ್ದೀರಿ. ಆಪ್ ಕೀ ನಾಮ್ ಮೇ ಬಿ ಶುಭ್ ಹೈ ಆಪ್‌ಕಿ ಯಾತ್ರೆ ನಯೇ ಯುಗ್ ಕಾ ಶುಭಾರಂಭ್ ಭಿ ಹೈ (ನಿಮ್ಮ ಹೆಸರಿನಲ್ಲಿಯೂ ಶುಭವಿದೆ. ನಿಮ್ಮ ಯಾತ್ರೆಯು ನವಯುಗದ ಶುಭಾರಂಭವೂ ಆಗಿದೆ)ಎಂದರು.
ಈ ಸಮಯದಲ್ಲ ನಾವಿಬ್ಬರಷ್ಟೇ ಮಾತನಾಡುತ್ತಿದ್ದೇವೆ, ಆದರೆ 140 ಕೋಟಿ ಭಾರತೀಯರ ಭಾವನೆಗಳೂ ನನ್ನೊಂದಿಗಿವೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿಯ ಅಭಿನಂದನೆಗೆ ಕೃತಜ್ಞತೆ ಅರ್ಪಿಸಿದ ಶುಭಾಂಶು ಅವರು, ‘‘ನಾನಿಲ್ಲಿ ಚೆನ್ನಾದ್ದೇನೆ ಹಾಗೂ ಸುರಕ್ಷಿತವಾಗಿದ್ದೇನೆ. ಇದೊಂದು ಹೊಸ ಅನುಭವವಾಗಿದೆ. ಈ ಪ್ರಯಾಣವು ಕೇವಲ ನನ್ನದಲ್ಲ. ಇಡೀ ದೇಶದ ಪಯಣವೂ ಹೌದು. ಭಾರತವನ್ನು ಬಾಹ್ಯಾಕಾಶದಲ್ಲಿ ಪ್ರತಿನಿಧಿಸಲು ನನಗೆ ಅತ್ಯಂತ ಹೆಮ್ಮೆಯಾಗುತ್ತಿದೆ’’ ಎಂದರು
ಬಾಹ್ಯಾಕಾಶಕ್ಕೆ ನಾನು ಕ್ಯಾರಟ್ ಹಲ್ವಾ, ಹೆಸರು ಬೇಳೆಯ ಹಲ್ವಾ ಹಾಗೂ ಮಾವಿನ ರಸ ಮತ್ತಿತರ ಹಲವಾರು ಭಾರತೀಯ ಖಾದ್ಯಗಳನ್ನು ತಂದಿರುವುದಾಗಿ ಶುಕ್ಲಾ ಹೇಳಿದರು. ಭಾರತದ ಶ್ರೀಮಂತ ಪಾಕ ವೈವಿಧ್ಯವನ್ನು ಎಲ್ಲಾ ಗಗನಯಾತ್ರಿಗಳೂ ಸೇವಿಸಿದ್ದಾರೆ ಹಾಗೂ ಮೆಚ್ಚಿಕೊಂಡಿದ್ದಾರೆ ಎಂದರು.
ಶುಭಾಂಶು ಶುಕ್ಲಾ ಕಳೆದ 41 ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯರಾಗಿದ್ದಾರೆ. ಅದಕ್ಕೂ ಮುನ್ನ 1984ರ ಎಪ್ರಿಲ್ 3ರಂದು ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ರಶ್ಯದ ಸೆಯೂಝ್ ಟಿ-11 ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು.
►ಗಡಿಗಳಿಲ್ಲದ ಭೂಮಿ ಕಾಣುತ್ತಿದೆ: ಶುಭಾಂಶು
ಅಂತರಿಕ್ಷದಲ್ಲಿ ಜಗತ್ತು ಯಾವುದೇ ಗಡಿಗಳಿಲ್ಲದೆ ಸಂಪೂರ್ಣವಾಗಿ ಒಂದಾಗಿ ಕಾಣುತ್ತಿದೆ ಎಂದು ಶುಭಾಂಶು ಶುಕ್ಲಾ ಬಣ್ಣಿಸಿದರು
‘‘ಭೂಮಿಯನ್ನು ಬಾಹ್ಯಾಕಾಶದಿಂದ ಕಂಡಾಗ ನನ್ನ ಮನಸಿನಲ್ಲಿ ಹೊಳೆದ ವಿಚಾರವೆಂದರೆ, ಈ ಭೂಮಿಯು ಸಂಪೂರ್ಣವಾಗಿ ಒಂದಾಗಿ ಕಾಣುತ್ತಿದೆ ಹಾಗೂ ಯಾವುದೇ ಗಡಿಯು ಗೋಚರಿಸುವುದಿಲ್ಲ. ಜಗತ್ತನ್ನು ನಾವು ಹೊರಗಿನಿಂದ ಕಂಡಾಗ, ಯಾವುದೇ ಗಡಿಗಳು, ಯಾವುದೇ ದೇಶಗಳು, .ಯಾವುದೇ ಆಡಳಿತ ಅಸ್ತಿತ್ವದಲ್ಲಿರುವ ಹಾಗೆ ಕಾಣುವುದಿಲ್ಲ್ಲ, ನಾವೆಲ್ಲರೂ ಮಾನವತೆಯ ಭಾಗವಾಗಿದ್ದೇವೆ. ಈ ಭೂಮಿ ನಮ್ಮೆಲ್ಲರಿಗೆ ಇರುವ ಒಂದೇ ಮನೆ ಮತ್ತು ನಾವೆಲ್ಲರೂ ಅದರೊಳಗಿದ್ದೇವೆ’’ ಎಂದು ಶುಭಾಂಶು ಪ್ರಧಾನಿಯವರೊಂದಿಗೆ ಭಾವುಕರಾಗಿ ಹೇಳಿದರು.