ಆರೋಪಿಯ ಪಾಪದ ಹೊರೆಯನ್ನು ಕುಟುಂಬ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
Photo credit: PTI
ಹೊಸದಿಲ್ಲಿ: ಗಾಂಜಾ ಪ್ರಕರಣದಲ್ಲಿ ಆರೋಪಿಯ ಸೋದರ ನೀಡಿದ ಭರವಸೆಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು, ಆರೋಪಿಯ ಪಾಪಗಳ ಹೊರೆಯನ್ನು ಆತನ ಕುಟುಂಬ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಮಾರು 2.91 ಕೋಟಿ ರೂ.ಮೌಲ್ಯದ 731.075 ಕೆ.ಜಿ.ಗಾಂಜಾವನ್ನು ಹೊಂದಿದ್ದ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಭಾರತೀಯ ಸೇನೆಯಲ್ಲಿ ಸಿಪಾಯಿ ಆಗಿರುವ ಆರೋಪಿಯ ಸೋದರ ಆತ ಪರಾರಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಪ್ರತಿವಾದಿ ಪರ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡರು.
ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ‘ಪ್ರತಿವಾದಿಯು ಪರಾರಿಯಾದರೆ ಆತನ ಸೋದರನನ್ನು ಜೈಲಿಗೆ ಕಳುಹಿಸುವಂತಿಲ್ಲ. ಭಾರತದಲ್ಲಿ ಆರೋಪಿಯ ಪಾಪಗಳನ್ನು ಆತನ ಸೋದರ ಅಥವಾ ಕುಟುಂಬದ ಇತರ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲʼ ಎಂದು ಹೇಳಿತು.
ಆರೋಪಿಗೆ ಜಾಮೀನು ನೀಡಿದ್ದ ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ಎನ್‌ಡಿಪಿಎಸ್ ಕಾಯ್ದೆಯ ಕಲಂ 37ರಡಿ ಹೇಳಲಾಗಿರುವ ಷರತ್ತುಗಳನ್ನು ಪೂರೈಸಲಾಗಿದೆಯೇ ಎನ್ನುವುದನ್ನು ಅದು ಪರಿಶೀಲಿಸಿಲ್ಲ ಎಂದು ಹೇಳಿತು.
ಅಕ್ರಮ ವಸ್ತುಗಳನ್ನು ಸಾಗಿಸಲು ವಾಹನದ ಅಡಿಭಾಗದಲ್ಲಿ ರಹಸ್ಯ ಖಾನೆಗಳನ್ನು ರಚಿಸಿದ್ದು ಸೇರಿದಂತೆ ಸಂಘಟಿತ ಕಳ್ಳಸಾಗಣೆಯನ್ನು ಆರೋಪಗಳು ಸೂಚಿಸುತ್ತವೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ಇಂತಹ ಸಂದರ್ಭಗಳಲ್ಲಿ ಆರೋಪಿಯು ಒಂದು ವರ್ಷ ನಾಲ್ಕು ತಿಂಗಳಿನಿಂದ ಕಸ್ಟಡಿಯಲ್ಲಿ ಇರುವುದನ್ನು ಅಸಮಂಜಸವಾಗಿ ದೀರ್ಘ ಅವಧಿ ಎಂದು ಪರಿಗಣಿಸುವಂತಿಲ್ಲ, ಏಕೆಂದರೆ ಇಂತಹ ಅಪರಾಧಗಳು ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿರುತ್ತವೆ ಎಂದು ಬೆಟ್ಟು ಮಾಡಿತು.
ನ್ಯಾಯಾಲಯವು ತನ್ನ ಆದೇಶದಲ್ಲಿ ಭಾರತೀಯ ಯುವಜನರಲ್ಲಿ ಮಾದಕ ದ್ರವ್ಯ ವ್ಯಸನ ಆತಂಕಕಾರಿಯಾಗಿ ಹೆಚ್ಚುತ್ತಿರುವ ಬಗ್ಗೆ ಕಳವಳಗಳನ್ನೂ ವ್ಯಕ್ತಪಡಿಸಿದೆ.