ಮಹಾರಾಷ್ಟ್ರ | ಕಾಣೆಯಾಗಿದ್ದ ಮಗನನ್ನು ಹುಡುಕಿಕೊಡುವಂತೆ ಹೇಳಿದ್ದಕ್ಕೆ ಪೊಲೀಸರ ನಿರ್ಲಕ್ಷ್ಯ ; ಸ್ವತಃ ಡಿಟೆಕ್ಟಿವ್ ಆಗಿ ಎರಡೂ ಕೊಲೆಗಳನ್ನು ಬಯಲಿಗೆಳೆದ ಒಬ್ಬಂಟಿ ತಾಯಿ!
pc : indianexpress.com
ಮುಂಬೈ: ಎಪ್ರಿಲ್ 17, 2015ರಂದು ಥಾಣೆ ಜಿಲ್ಲೆಯ ಮುಂಬ್ರಾದ ಅಮೃತ ನಗರ ನಿವಾಸಿ ಫರೀದಾ ಖಾತುನ್ ಅವರ 17ರ ಹರೆಯದ ಪುತ್ರ ಸೊಹೈಲ್ ಖುರೇಶಿ 10 ನಿಮಿಷಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿ ಮನೆಯಿಂದ ಹೊರಬಂದಿದ್ದ. ಆದರೆ ಮೂರು ದಿನಗಳಾದರೂ ಆತ ವಾಪಸಾಗದಿದ್ದಾಗ ಆತಂಕಗೊಂಡಿದ್ದ ಖಾತುನ್ ನಾಪತ್ತೆ ದೂರನ್ನು ದಾಖಲಿಸಲು ಸ್ಥಳೀಯ ಪೋಲಿಸ್ ಠಾಣೆಗೆ ಧಾವಿಸಿದ್ದರು. ಆದರೆ ಪೋಲಿಸರು ಅವರ ಕಳವಳಗಳಿಗೆ ಕಿವಿಗೊಟ್ಟಿರಲಿಲ್ಲ. ಆತ ತನ್ನ ಪ್ರಾಯದ ಇತರ ಹುಡುಗರಂತೆ ಅಜ್ಮೀರ್ ದರ್ಗಾಕ್ಕೆ ಹೋಗಿರಬಹುದು ಎಂದು ಹೇಳಿ ಪೋಲಿಸರು ಅವರನ್ನು ವಾಪಸ್ ಕಳುಹಿಸಿದ್ದರು. ಆದರೆ ಎಲ್ಲಿಯೋ ಏನೋ ತಪ್ಪಾಗಿದೆ ಎನ್ನುವುದು ಹೆತ್ತವರಿಗೆ ತಿಳಿದಿತ್ತು.
ಪತಿಯಿಂದ ಪರಿತ್ಯಕ್ತರಾಗಿದ್ದ ಖಾತುನ್ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಮುಂದಿನ ಕೆಲವು ತಿಂಗಳುಗಳ ಕಾಲ ಸುಳಿವುಗಳನ್ನು ಅನುಸರಿಸುವ ಮತ್ತು ಶಂಕಿತರನ್ನು ಪ್ರಶ್ನಿಸುವ ಮೂಲಕ ಮಗನಿಗಾಗಿ ಹುಡುಕಾಟವನ್ನು ಅವರು ಮುಂದುವರಿಸಿದ್ದರು.
ದಿನಗಳು ಕಳೆಯುತ್ತಿದ್ದವು, ಆದರೆ ಖುರೇಶಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಖಾತುನ್ ಸ್ಥಳೀಯ ಪತ್ರಕರ್ತ ಮುಬಿನ್ ಶೇಖ್ ನೆರವಿನೊಂದಿಗೆ ಸ್ವತಃ ತನಿಖೆಗಿಳಿದಿದ್ದರು. ಖುರೇಶಿಯ ಹೆಚ್ಚಿನ ಸ್ನೇಹಿತರು ರಬಾಲೆ ನಿವಾಸಿಗಳಾಗಿದ್ದರಿಂದ ಖಾತುನ್ ಮತ್ತು ಶೇಖ್ ಅಲ್ಲಿಯ ಪೋಲಿಸ್ ಠಾಣೆಗೆ ತೆರಳಿದ್ದರು. ಹತ್ತಿರದ ಜೈಲುಗಳಲ್ಲಿ ಪರಿಶೀಲಿಸುವಂತೆ ಅಲ್ಲಿಯ ಪೋಲಿಸ್ ಅಧಿಕಾರಿಗಳು ಖಾತುನ್‌ಗೆ ಸೂಚಿಸಿದ್ದರು.
ವಿಷಯವನ್ನು ಇಷ್ಟಕ್ಕೇ ಬಿಡದಿರಲು ನಿರ್ಧರಿಸಿದ್ದ ಖಾತುನ್ ಮೊದಲು ಅಜ್ಮೀರ್ ದಲ್ಲಿನ ಸಂಬಂಧಿಕರಿಗೆ ದೂರವಾಣಿ ಕರೆಗಳನ್ನು ಮಾಡಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅವರು ಥಾಣೆ, ಕಲ್ಯಾಣ ಮತ್ತು ತಲೋಜಾಗಳಲ್ಲಿ ಜೈಲುಗಳಲ್ಲಿಯೂ ಹುಡುಕಾಟ ನಡೆಸಿದ್ದರು. ಹಲವಾರು ಸಂದರ್ಭಗಳಲ್ಲಿ ಆಕೆ ಇಡೀ ದಿನ ಜೈಲುಗಳ ಹೊರಗೆ ಕಾದು ನಿಂತಿದ್ದರು. ಆದರೆ ಅದರಿಂದಲೂ ಯಾವುದೇ ಉಪಯೋಗವಾಗಿರಲಿಲ್ಲ. ಮಗನ ಪತ್ತೆಗಾಗಿ ದೃಢ ನಿರ್ಧಾರ ಮಾಡಿದ್ದ ಅವರು ಪ್ರದೇಶದಲ್ಲಿಯ ಮಕ್ಕಳ ನಿರೀಕ್ಷಣಾ ಗೃಹಗಳಿಗೂ ಭೇಟಿ ನೀಡಿದ್ದರು. ಕೊನೆಯ ಪ್ರಯತ್ನವಾಗಿ ಶವಾಗಾರಗಳಿಗೂ ಭೇಟಿ ನೀಡಿದ್ದರುಹ ಆದರೆ ಖುರೇಶಿಯ ಸುಳಿವು ಲಭಿಸಿರಲಿಲ್ಲ.
ತಿಂಗಳುಗಳು ಉರುಳುತ್ತಿದ್ದಂತೆ ತನ್ನ ಇನ್ನೋರ್ವ ಮಗ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜೆಜೆ ಆಸ್ಪತ್ರೆಯಲ್ಲಿನ ಕೆಲಸದ ನಡುವೆಯೇ ಖಾತುನ್ ನಾಪತ್ತೆಯಾಗಿದ್ದ ಮಗನಿಗಾಗಿ ಶೋಧವನ್ನು ಮುಂದುವರಿಸಿದ್ದರು.
ಸೆಪ್ಟಂಬರ್‌ನಲ್ಲಿ ಖುರೇಶಿಯ ಸ್ನೇಹಿತ ಶಬ್ಬೀರ್ ಕೂಡ ತನ್ನ ಮಗ ನಾಪತ್ತೆಯಾಗಿದ್ದ ದಿನದಿಂದಲೇ ಕಾಣೆಯಾಗಿದ್ದಾನೆ ಎಂಬ ಮಾಹಿತಿ ಅವರಿಗೆ ದೊರಕಿತ್ತು. ಶಬ್ಬೀರ್‌ನ ತಾಯಿಯನ್ನು ಭೇಟಿಯಾದಾಗ ಅವರು ತಮ್ಮ ಮಗನೂ ನಾಪತ್ತೆಯಾಗಿರುವುದನ್ನು ದೃಢಪಡಿಸಿದ್ದರು. ಇಬ್ಬರನ್ನೂ ಯಾರಾದರೂ ಕೊಲೆ ಮಾಡಿದ್ದಾರೆಯೇ ಎಂಬ ಆತಂಕ ಅವರಲ್ಲಿ ಹುಟ್ಟಿತ್ತು.
ಖುರೇಶಿಯ ಸ್ನೇಹಿತರೊಡನೆ ಮಾತನಾಡಿದ ಖಾತುನ್‌ಗೆ ಖುರೇಶಿ ಮತ್ತು ಶಬ್ಬೀರ್ ಇಬ್ಬರಿಗೂ ಮಿತ್ರನಾಗಿದ್ದ ಇನ್ನೋರ್ವನ ಬಗ್ಗೆ ಮಾಹಿತಿ ಲಭಿಸಿತ್ತು. ಅವರು ಆತನನ್ನು ಭೇಟಿಯಾಗಿ ಪ್ರಶ್ನಿಸಿದಾಗ ಆತ ತಮ್ಮ ಇತರ ಇಬ್ಬರು ಸ್ನೇಹಿತರಾದ ದೀಪಕ್ ವಾಲ್ಮೀಕಿ ಅಲಿಯಾಸ್ ಸ್ಯಾಮ್ ಮತ್ತು ಮುಹಮ್ಮದ್ ಚೌಧರಿ ಅಲಿಯಾಸ್ ಬಾಬು ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದ್ದ. ಪ್ರಕರಣದ ವಿವರಗಳೊಂದಿಗೆ ಥಾಣೆ ಕ್ರೈಂ ಬ್ರ್ಯಾಂಚ್‌ನ್ನು ಸಂಪರ್ಕಿಸಿದ ಖಾತುನ್, ಹಸೀನಾ ಮತ್ತು ಶೇಖ್ ಶಂಕಿತ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ನೀಡಿದ್ದರು.
ಕೊನೆಗೂ ಕ್ರೈಂ ಬ್ರ್ಯಾಂಚ್ ತನಿಖೆಯನ್ನು ಆರಂಭಿಸಿತ್ತು ಮತ್ತು ಖಾತುನ್‌ರ ಭೀತಿ ನಿಜವಾಗಿತ್ತು.
ಖುರೇಶಿ ಮತ್ತು ಶಬ್ಬೀರ್‌ರನ್ನು ವಾಲ್ಮೀಕಿ ಮತ್ತು ಚೌಧರಿ ಕೊಲೆ ಮಾಡಿದ್ದ. ಶಬ್ಬೀರ್ ತನ್ನ ಸೋದರಿಯೊಂದಿಗೆ ಸಲಿಗೆ ಹೊಂದಿದ್ದನ್ನು ವಾಲ್ಮೀಕಿ ವಿರೋಧಿಸಿದ್ದ. ಹೀಗಾಗಿ ಶಬ್ಬೀರ್‌ನನ್ನು ಮೊದಲು ಕೊಲೆ ಮಾಡಿದ್ದರು. ತಂಗಿಯ ಜೊತೆ ಸಲಿಗೆಯಿಂದಿದ್ದ ಮಾಹಿತಿಯನ್ನು ಶಬ್ಬೀರ್‌ಗೆ ಖುರೇಶಿಯೇ ನೀಡಿದ್ದ ಎಂದು ಶಂಕಿಸಿದ್ದ ಹಂತಕರು ಆತನನ್ನೂ ಕೊಲೆ ಮಾಡಿದ್ದರು ಎನ್ನುವುದು ಪೋಲಿಸರ ತನಿಖೆಯಿಂದ ಬೆಳಕಿಗೆ ಬಂದಿತ್ತು.
2015, ನವಂಬರ್‌ನಲ್ಲಿ ಆರೋಪಿಗಳು ಇಬ್ಬರೂ ತಾಯಂದಿರು ಮತ್ತು ಪೋಲಿಸರನ್ನು ತಾವು ಖುರೇಶಿ ಮತ್ತು ಶಬ್ಬೀರ್‌ರ ಮೃತದೇಹಗಳನ್ನು ಹೂತು ಹಾಕಿದ್ದ ಥುರ್ಬೆಯ ಮೈದಾನವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿಗೆ ನಾಪತ್ತೆಯಾಗಿದ್ದ ಮಗನಿಗಾಗಿ ಖಾತುನ್‌ರ ಶೋಧ ನೋವಿನೊಂದಿಗೆ ಅಂತ್ಯಗೊಂಡಿತ್ತು.
ಸೌಜನ್ಯ : indianexpress.com