ಪಾಕಿಸ್ತಾನದ ಸಂಪರ್ಕವನ್ನು ಅಲ್ಲಗಳೆದ ಸೋನಂ ವಾಂಗ್ಚುಕ್ ರ ಪತ್ನಿ
ಸೆಪ್ಟೆಂಬರ್ 4ರ ಹಿಂಸಾಚಾರಕ್ಕೆ ಭದ್ರತಾ ಪಡೆಗಳು ಕಾರಣ ಎಂದು ದೂಷಿಸಿದ ಗೀತಾಂಜಲ ಆಂಗ್ಮೊ
PC : PTI
ಲೇಹ್/ಹೊಸದಿಲ್ಲಿ: ಜೈಲಿನಲ್ಲಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ಪಾಕಿಸ್ತಾನದ ಸಂಪರ್ಕವಿದೆ ಹಾಗೂ ಅವರು ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳನ್ನು ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅಲ್ಲಗಳೆದಿದ್ದು, ಸೆಪ್ಟೆಂಬರ್ 4ರ ಹಿಂಸಾಚಾರಕ್ಕೆ ಭದ್ರತಾ ಪಡೆಗಳು ಕಾರಣ ಎಂದು ದೂಷಿಸಿದ್ದಾರೆ.
PTI ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ ಸಂಸ್ಥೆಯ ಸಂಸ್ಥಾಪಕಿಯೂ ಆದ ಗೀತಾಂಜಲಿ ಆಂಗ್ಮೊ, ಲೇಹ್ ನಲ್ಲಿ ಹಿಂಸಾಚಾರ ನಡೆಯಲು ಸೋನಂ ವಾಂಗ್ಚುಕ್ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
“ಸೋನಂ ವಾಂಗ್ಚುಕ್ ಸಾಧ್ಯವಾದಷ್ಟೂ ಮಹಾನ್ ಗಾಂಧಿ ಮಾರ್ಗದಲ್ಲಿ ಪ್ರತಿಭಟಿಸುತ್ತಿದ್ದರು. ಆದರೆ, ಕೇಂದ್ರ ಮೀಸಲು ಪೊಲೀಸ್ ಪಡೆಯ ಕೃತ್ಯದಿಂದ ಸೆಪ್ಟೆಂಬರ್ 4ರಂದು ಪರಿಸ್ಥಿತಿ ಉದ್ವಿಗ್ನಗೊಂಡಿತು” ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಪೊಲೀಸರು ಬಂಧನದ ಆದೇಶವನ್ನು ಹಸ್ತಾಂತರಿಸಿಲ್ಲ ಎಂದು ಆರೋಪಿಸಿರುವ ಗೀತಾಂಜಲಿ ಅಂಗ್ಮೊ, “ಅದನ್ನು ಶುಕ್ರವಾರ ಕಳುಹಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ. ನಾವು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
ಕಳೆದ ಬುಧವಾರ ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಲೇಹ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಇದಾದ ಎರಡು ದಿನಗಳ ಬಳಿಕ, ಶುಕ್ರವಾರದಂದು ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. ಸೆಪ್ಟೆಂಬರ್ 4ರಂದು ಲೇಹ್ ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, 90 ಮಂದಿ ಗಾಯಗೊಂಡಿದ್ದರು.
ಲಡಾಖ್ ಹಕ್ಕಿಗಾಗಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಸೋನಂ ವಾಂಗ್ಚುಕ್ ಪ್ರಮುಖ ವ್ಯಕ್ತಿಯಾಗಿದ್ದು, ಅವರನ್ನೀಗ ರಾಜಸ್ಥಾನದ ಜೋಧಪುರ್ ಜೈಲಿನಲ್ಲಿಡಲಾಗಿದೆ. ಅವರ ಬಂಧನದ ವಿರುದ್ಧ ವಿವಿಧ ವಲಯಗಳಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.