×
Ad

ಶೀಘ್ರವಾಗಿ ಜನಗಣತಿಯನ್ನು ನಡೆಸಿ: ಕೇಂದ್ರ ಸರಕಾರಕ್ಕೆ ಸೋನಿಯಾ ಗಾಂಧಿ ಒತ್ತಾಯ

Update: 2025-02-10 19:27 IST
Photo | PTI

ಹೊಸದಿಲ್ಲಿ: ಜನಗಣತಿಯನ್ನು ಅತಿ ಶೀಘ್ರವಾಗಿ ನಡೆಸುವಂತೆ ಕಾಂಗ್ರೆಸ್ ನಾಯಕಿ, ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಸಾಕಷ್ಟು ವಿಳಂಬವಾಗಿರುವ ಹತ್ತು ವರ್ಷಕ್ಕೆ ನಡೆಸಬೇಕಾದ ಜನಗಣತಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ನಡೆಸಬೇಕು. ಜನಗಣತಿ ಮಾಡದ ಕಾರಣ ಕೋಟ್ಯಾಂತರ ಜನರು ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಉಚಿತ ಮತ್ತು ಸಬ್ಸಿಡಿ ಆಹಾರ ಧಾನ್ಯಗಳ ಪ್ರಯೋಜನಗಳಿಂದ ವಂಚಿತರಾಗುತ್ತಾರೆ. ಜನಗಣತಿ ನಡೆಸುವ ಮೂಲಕ ಇದರಿಂದ ಕಡ್ಡಾಯ ಆಹಾರ ಭದ್ರತೆಯಿಂದ ಹೊರಗುಳಿದಿರುವ 14 ಕೋಟಿ ಜನರನ್ನು ಅದರ ವ್ಯಾಪ್ತಿಗೆ ತರಬಹುದು. ಆಹಾರ ಭದ್ರತೆ ಒಂದು ಸವಲತ್ತು ಅಲ್ಲ, ಅದು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.

2021ರ ಜನಗಣತಿ ನಡೆಸಲು ವಿಳಂಬವಾಗಿರುವುದರಿಂದ, 2011ರ ಜನಗಣತಿ ಅನ್ವಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಅಧಿಕೃತ ಜನಸಂಖ್ಯೆ ಮುನ್ನೋಟವನ್ನು ಉಲ್ಲೇಖಿಸಿರುವ ಸಾಮಾಜಿಕ ಹೋರಾಟಗಾರರು, ಸುಮಾರು 14 ಕೋಟಿ ಜನರನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ರಾಜ್ಯಸಭೆಯ ಗಮನಕ್ಕೆ ತಂದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ವ್ಯಾಪ್ತಿಗೆ ಗ್ರಾಮೀಣ ಪ್ರದೇಶದ ಶೇ. 75ರವರೆಗಿನ ಜನ ಹಾಗೂ ನಗರ ಪ್ರದೇಶದ ಶೇ. 50ರವರೆಗಿನ ಜನ ಸೇರ್ಪಡೆಯಾಗಿದ್ದಾರೆ. ಇವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ಸರಕಾರವು ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಆಹಾರ ಧಾನ್ಯವನ್ನು ವಿತರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News