×
Ad

ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು: ಬಿಜೆಪಿ ಆರೋಪ

Update: 2025-08-13 16:31 IST

ಸೋನಿಯಾ ಗಾಂಧಿ (Photo: PTI)

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಮತಗಳ್ಳತನ ಆರೋಪಕ್ಕೆ ಸೋಮವಾರ ತಿರುಗೇಟು ನೀಡಿರುವ ಬಿಜೆಪಿ, ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪೌರತ್ವ ಪಡೆದರೂ, ಅವರ ಹೆಸರು ಅದಕ್ಕೂ ಮೂರು ವರ್ಷಗಳ ಮುನ್ನವೇ 1980ರ ಮತಪಟ್ಟಿಯಲ್ಲಿತ್ತು ಎಂದು ಆರೋಪಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, “ಭಾರತೀಯ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರ ಹೆಸರಿದ್ದದ್ದು ಚುನಾವಣಾ ಕಾನೂನುಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಬಹುಶಃ ರಾಹುಲ್ ಗಾಂಧಿಯವರ ಅನರ್ಹ, ಅಕ್ರಮ ಮತದಾರರ ಪರ ಒಲವು ಹಾಗೂ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಇರುವ ವಿರೋಧವನ್ನು ವಿವರಿಸುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

ಅವರ ಪ್ರಕಾರ, 1980ರ ಹೊಸದಿಲ್ಲಿ ಲೋಕಸಭಾ ಕ್ಷೇತ್ರಗಳ ಮತಪಟ್ಟಿಗಳ ಪರಿಷ್ಕರಣೆಯಲ್ಲಿ ಜನವರಿ 1, 1980ರಿಂದ ಊರ್ಜಿತಗೊಳ್ಳುವಂತೆ ಸೋನಿಯಾ ಗಾಂಧಿ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು ಎನ್ನಲಾಗಿದೆ. ಈ ವೇಳೆ ಇಟಲಿ ಪೌರತ್ವ ಹೊಂದಿದ್ದ ಸೋನಿಯಾ ಗಾಂಧಿ ಅವರು ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಅಧಿಕೃತ ನಿವಾಸವಾದ ನಂ. 1, ಸಫ್ದರ್ ಜಂಗ್ ರಸ್ತೆಯ ನಿವಾಸದಲ್ಲಿ ಗಾಂಧಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಹೆಸರನ್ನು ಮತಗಟ್ಟೆ ಸಂಖ್ಯೆ 145ರಲ್ಲಿನ ಮತಪಟ್ಟಿಯ ಕ್ರಮಾಂಕ ಸಂಖ್ಯೆ 145ರಲ್ಲಿ ಪಟ್ಟಿ ಮಾಡಲಾಗಿದ್ದು, ಅವರೊಂದಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಹಾಗೂ ಮೇನಕಾ ಗಾಂಧಿ ಹೆಸರಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. “ಭಾರತೀಯ ಮತದಾರರ ನೋಂದಣಿಗೆ ಭಾರತೀಯ ಪೌರತ್ವ ಕಡ್ಡಾಯವಾಗಿದ್ದು, ಈ ನಮೂದು ಚುನಾವಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಹೆಸರನ್ನು 1982ರಲ್ಲಿ ತೆಗೆದು ಹಾಕಲಾಯಿತಾದರೂ 1983ರಲ್ಲಿ ಮತ್ತೆ ಅವರ ಹೆಸರು ಮತಪಟ್ಟಿಯಲ್ಲಿ ಕಾಣಿಸಿಕೊಂಡಿತು. ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿಯನ್ನು ವಿವಾಹವಾಗಿ 15 ವರ್ಷಗಳಾದರೂ ಯಾಕೆ ಭಾರತೀಯ ಪೌರತ್ವವನ್ನು ಸ್ವೀಕರಿಸಿರಲಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ. “ಇದು ನಿರ್ಲಜ್ಜ ಚುನಾವಣಾ ಅಕ್ರಮವಲ್ಲದೆ ಮತ್ತೇನು?” ಎಂದು 1980ರ ಮತಪಟ್ಟಿಯೊಂದನ್ನು ಹಂಚಿಕೊಂಡು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಮತಗಳ್ಳತನದ ಬಗ್ಗೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಮತದಾರರ ಅಕ್ರಮ ನಡೆಸಿದೆ ಎಂದು ಪ್ರತಿ ಆರೋಪ ಮಾಡಿದೆ.

ರಾಹುಲ್ ಗಾಂಧಿ ಆರೋಪಗಳ ಕುರಿತು ಸುದ್ದಿ ಗೋಷ್ಠಿಯೊಂದರಲ್ಲಿ ಪ್ರತಿಕ್ರಿಯಿಸಿದ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, “ಕಾಂಗ್ರೆಸ್ ಹೊಂದಿರುವ ಕ್ಷೇತ್ರಗಳಲ್ಲಿ ಅಕ್ರಮಗಳು ನಡೆದಿರುವುದಕ್ಕೆ ಪುರಾವೆಗಳಿದ್ದರೂ, ಅದನ್ನು ಆ ಪಕ್ಷವೇಕೆ ನಿರ್ಲಕ್ಷಿಸಿತು ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News