ಹಣ ಪಾವತಿ ಮಾಡಬೇಕಿದ್ದರೆ ಮರಾಠಿಯಲ್ಲಿ ಮಾತನಾಡಬೇಕು : ಪಿಝ್ಝಾ ಡೆಲಿವರಿ ಬಾಯ್‌ಗೆ ಬಲವಂತ ಮಾಡಿದ ದಂಪತಿ
Photo | NDTV
ಮುಂಬೈ : ಹಣ ಪಾವತಿ ಮಾಡಬೇಕಿದ್ದರೆ ಮರಾಠಿಯಲ್ಲಿ ಮಾತನಾಡಬೇಕೆಂದು ಮುಂಬೈನಲ್ಲಿ ಪಿಝ್ಝಾ ಡೆಲಿವರಿ ಬಾಯ್‌ಗೆ ದಂಪತಿ ಬಲವಂತಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸೋಮವಾರ ಘಟನೆ ನಡೆದಿದೆ. ಡೆಲಿವರಿ ಬಾಯ್ ಮತ್ತು ದಂಪತಿಯ ನಡುವಿನ ಸಂಭಾಷಣೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊದಲು ಮರಾಠಿಯಲ್ಲಿ ಮಾತನಾಡುವಂತೆ ಪಿಝ್ಝಾ ಡೆಲಿವರಿ ಬಾಯ್‌ಗೆ ದಂಪತಿ ಆಗ್ರಹಿಸಿದ್ದಾರೆ. ಆಗ ಡೆಲಿವರಿ ಬಾಯ್, ಮರಾಠಿಯಲ್ಲಿ ಮಾತನಾಡುವುದು ಕಡ್ಡಾಯವೇ ಎಂದು ದಂಪತಿಗೆ ಪ್ರಶ್ನಿಸಿದ್ದಾರೆ. ಹೌದು, ಇಲ್ಲಿ ಇದೇ ರೀತಿ ಎಂದು ದಂಪತಿ ಹೇಳಿದ್ದಾರೆ.
ಯಾರು ಹೇಳಿದ್ದು ಈ ರೀತಿ? ನಿಮ್ಮ ಷರತ್ತು ಇದಾಗಿದ್ದರೆ ನೀವು ಆರ್ಡರ್ ಮಾಡಬಾರದಿತ್ತು. ನೀವು ಹಣ ಪಾವತಿಸಲು ಬಯಸುವುದಿಲ್ಲ ಅಲ್ಲವೇ ಎಂದು ಡೆಲಿವರಿ ಬಾಯ್ ಇಬ್ಬರ ನಡುವಿನ ಸಂಭಾಷಣೆಯನ್ನು ಚಿತ್ರೀಕರಿಸುತ್ತಾ ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ಇದೇ ರೀತಿ ಕೆಲ ಹೊತ್ತು ಮಹಿಳೆ ಮತ್ತು ಡೆಲಿವರಿ ಬಾಯ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕೊನೆಗೆ ಡೆಲಿವರಿ ಬಾಯ್ ಹಣವಿಲ್ಲದೆ ಬರೀ ಕೈಯ್ಯಲ್ಲಿ ವಾಪಾಸ್ಸಾದರು. ಈ ಬಗ್ಗೆ ಸಂಬಂಧಪಟ್ಟ ಕಂಪೆನಿ ಇನ್ನೂ ಪ್ರತಿಕ್ರಿಯಿಸಿಲ್ಲ.