×
Ad

ನೋಯ್ಡಾ ಡೇಕೇರ್‌ನಲ್ಲಿ ಮಗುವನ್ನು ಡೋಂಟ್ ಕೇರ್ | ಮಗುವಿನ ಮೇಲೆ ಹಲ್ಲೆ ಮಾಡಿ ನೆಲಕ್ಕೆಸೆದ ಸಿಬ್ಬಂದಿ : ಪ್ರಕರಣ ದಾಖಲು

Update: 2025-08-11 13:22 IST

Photo | timesofindia

ನೋಯ್ಡಾ: ಸೆಕ್ಟರ್‌ 137ರ ಖಾಸಗಿ “ಬ್ಲಿಪ್ಪಿ” ಡೇಕೇರ್ ಕೇಂದ್ರದಲ್ಲಿ ಕೇವಲ 15 ತಿಂಗಳ ಹೆಣ್ಣುಮಗುವೊಂದು ಕ್ರೂರ ಹಿಂಸೆಗೆ ಒಳಗಾದ ಘಟನೆ ಪೋಷಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಕ್ಕಳ ಹಕ್ಕು ರಕ್ಷಣಾ ಸಂಘಟನೆಗಳಲ್ಲಿ ಆಕ್ರೋಶ ಹುಟ್ಟಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸಹಾಯಕಿ ಸೋನಾಲಿ ಶಿಶುವನ್ನು ಬಲವಂತವಾಗಿ ನೆಲಕ್ಕೆ ಎಸೆದು, ಕಪಾಳಕ್ಕೆ ಹೊಡೆಯುತ್ತಿರುವುದು, ಪ್ಲಾಸ್ಟಿಕ್ ಬ್ಯಾಟ್‌ನಿಂದ ಹಲ್ಲೆ ಮಾಡುತ್ತಿರುವುದು, ತೊಡೆಗಳಿಗೆ ಕಚ್ಚಿರುವುದು ಕಂಡು ಬಂದಿದೆ.

ಪರಾಸ್ ಟಿಯೇರಿಯಾ ನಿವಾಸಿ ಮೋನಿಕಾ ತಮ್ಮ ಮಗಳನ್ನು ಮೇ ತಿಂಗಳಿಂದ ಪ್ರತಿದಿನ ಎರಡು ಗಂಟೆಗಳ ಕಾಲ ಈ ಡೇಕೇರ್ ಕೇಂದ್ರಕ್ಕೆ ಕಳುಹಿಸುತ್ತಿದ್ದರು. ಆಗಸ್ಟ್ 4ರಂದು, ಶಿಶುವನ್ನು ಕರೆದುಕೊಂಡು ಬಂದಾಗ ಆಕೆ ನಿರಂತರವಾಗಿ ಅಳುತ್ತಿದ್ದಳು. ತೊಡೆಯ ಮೇಲೆ ಗೋಚರಿಸಿದ ಗಾಯದ ಗುರುತುಗಳನ್ನು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಿದಾಗ, ಅವು ಮಾನವ ಹಲ್ಲಿನ ಗುರುತುಗಳೆಂದು ದೃಢಪಟ್ಟವು.

ಈ ಹಿನ್ನೆಲೆಯಲ್ಲಿ, ಮೋನಿಕಾ ತಕ್ಷಣವೇ ಡೇಕೇರ್ ಕೇಂದ್ರಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಒತ್ತಾಯಿಸಿದರು. ದೃಶ್ಯಾವಳಿಗಳಲ್ಲಿ ಕಂಡುಬಂದ ಕ್ರೂರ ಹಲ್ಲೆಯ ದೃಶ್ಯಗಳು ಪೋಷಕರ ಮನಸ್ಸಿಗೆ ಆಘಾತ ತಂದವು.

ಶಿಶುವಿನ ಅಳುತ್ತಿದ್ದರೂ ಹಲ್ಲೆ ಮುಂದುವರೆದಿದ್ದು, ಘಟನೆಯ ಸಮಯದಲ್ಲಿ ಡೇಕೇರ್ ಮಾಲಕಿ ಚಾರು ಸ್ಥಳದಲ್ಲಿದ್ದರೂ, ಯಾವುದೇ ತುರ್ತು ಕ್ರಮ ಕೈಗೊಳ್ಳದಿರುವುದು ಸ್ಪಷ್ಟವಾಗಿದೆ.

ಮೋನಿಕಾ ದೂರಿನಲ್ಲಿ, ಘಟನೆಯ ನಂತರ ಸಿಬ್ಬಂದಿ ಸೋನಾಲಿ ತಮಗೆ ಅವಾಚ್ಯ ಶಬ್ದ ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮಾಲಕಿ ಚಾರು ಹಲ್ಲೆಯನ್ನು ತಡೆಯದೇ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಆಕೆ ಮೇಲೆ ಪ್ರಕರಣ ದಾಖಲಾಗಿದೆ. ಮಕ್ಕಳ ಹಿಂಸಾಚಾರ ತಡೆ ಕಾನೂನುಗಳ ಅಡಿಯಲ್ಲಿ ಇಬ್ಬರ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್‌ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 351(2) (ಕ್ರಿಮಿನಲ್ ಬೆದರಿಕೆ) ಮತ್ತು 352 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೋನಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಶಿಶುವಿನ ಗಾಯಗಳ ಸ್ವರೂಪ ಮತ್ತು ಗಂಭೀರತೆಯನ್ನು ನಿರ್ಣಯಿಸಲು ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋನಾಲಿ ಕೇವಲ 10 ದಿನಗಳ ಹಿಂದೆಯಷ್ಟೇ ಈ ಡೇಕೇರ್‌ನಲ್ಲಿ ಕೆಲಸ ಪ್ರಾರಂಭಿಸಿದ್ದಳು ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News