ಉತ್ತರ ಪ್ರದೇಶ | ಬಾರಾಬಂಕಿಯ ದೇವಸ್ಥಾನದಲ್ಲಿ ಕಾಲ್ತುಳಿತ: ಕನಿಷ್ಠ ಇಬ್ಬರು ಮೃತ್ಯು, 30ಕ್ಕೂ ಅಧಿಕ ಮಂದಿಗೆ ಗಾಯ
Photo | NDTV
ಲಕ್ನೋ : ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಅವಸಾನೇಶ್ವರ ದೇವಸ್ಥಾನದಲ್ಲಿ ವಿದ್ಯುತ್ ತಂತಿ ಮುರಿದು ಬಿದ್ದ ಕಾರಣ ಭಯಭೀತರಾಗಿ ಭಕ್ತರು ಓಡಿಹೋದ ಪರಿಣಾಮ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮೃತಪಟ್ಟಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ರವಿವಾರ ಉತ್ತರಾಖಂಡದ ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿ 8 ಜನರು ಮೃತಪಟ್ಟಿದ್ದರು. ಇದಾದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಉತ್ತರ ಪ್ರದೇಶದ ಹೈದರ್‌ಗಢ ಪ್ರದೇಶದ ಅವಸಾನೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಭಾರಿ ಜನಸಮೂಹ ಸೇರಿತ್ತು. ಭಕ್ತರು ಜಲಾಭಿಷೇಕ ಮಾಡಲು ದೇವಾಲಯದಲ್ಲಿ ಜಮಾಯಿಸಿದ್ದರು.
ವರದಿಗಳ ಪ್ರಕಾರ, ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದಾಗ ಕೋತಿಗಳು ಮೇಲಿರುವ ವಿದ್ಯುತ್ ತಂತಿ ಮೇಲೆ ನಿಂತ ಕಾರಣ ವಿದ್ಯುತ್ ತಂತಿ ಮುರಿದು ಬಿದ್ದಿವೆ. ತುಂಡಾದ ತಂತಿಗಳು ಟಿನ್ ಶೀಟ್‌ಗಳ ಮೇಲೆ ಬಿದ್ದು ವಿದ್ಯುತ್ ಹರಿದಿದೆ. ಈ ವೇಳೆ ಗಾಬರಿಗೊಂಡು ಭಕ್ತರು ಓಡಿ ಹೋಗಿದ್ದು ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೈದರ್ ಘರ್ ಮತ್ತು ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.