ಆಪರೇಷನ್ ಸಿಂಧೂರ್ | ಸಶಸ್ತ್ರ ಪಡೆಗಳೊಂದಿಗೆ ಕಾಂಗ್ರೆಸ್ ಪಕ್ಷವು ದೃಢವಾಗಿ ನಿಲ್ಲುತ್ತದೆ : ಜೈರಾಮ್ ರಮೇಶ್
Photo | economictimes
ಹೊಸದಿಲ್ಲಿ : ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪಕ್ಷವು ಸಶಸ್ತ್ರ ಪಡೆಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದನೆಯ ಎಲ್ಲಾ ಮೂಲಗಳನ್ನು ನಿರ್ಮೂಲನೆ ಮಾಡುವ ಭಾರತದ ಬದ್ಧತೆಯು ರಾಜಿಯಾಗಬಾರದು. ಇದು ಏಕತೆ ಮತ್ತು ಒಗ್ಗಟ್ಟಿನ ಸಮಯ. ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ರಾಷ್ಟ್ರದ ಪ್ರತಿಕ್ರಿಯೆಯಲ್ಲಿ ಸರಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ʼಆಪರೇಷನ್ ಸಿಂಧೂರ್ʼ ಎಂದು ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಕೆಲ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕರ ಪ್ರಕಾರ, ಭಾರತ ಪಾಕಿಸ್ತಾನದ 6 ಸ್ಥಳಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 8 ಜನರು ಮೃತಪಟ್ಟು 22 ಜನರು ಗಾಯಗೊಂಡಿದ್ದಾರೆ.