ಕಚೇರಿಗೆ ಹೋಗಲು ಪ್ರೈವೆಟ್ ಜೆಟ್ ವಿಮಾನ ಬಳಸಲಿರುವ ಸ್ಟಾರ್ ಬಕ್ಸ್ ನೂತನ ಸಿಇಒ ಬ್ರಿಯಾನ್ ನಿಕೋಲ್
ಬ್ರಿಯಾನ್ ನಿಕೋಲ್ | PC : NDTV
ಕ್ಯಾಲಿಫೋರ್ನಿಯ: ಪ್ರಖ್ಯಾತ ಸ್ಟಾರ್ ಬಕ್ ಕಂಪನಿಯ ನೂತನ ಸಿಇಒ ಆಗಿ ಬ್ರಿಯಾನ್ ನಿಕೋಲ್ ನೇಮಕಗೊಂಡಿದ್ದು, ಅವರು ಮುಂದಿನ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಅಸಾಧಾರಣ ಸಂಗತಿಯೆಂದರೆ, ಅವರು ತಮ್ಮ ಕರ್ತವ್ಯ ನಿರ್ವಹಿಸಲು ಸಿಯಾಟಲ್ ನಲ್ಲಿರುವ ಕಂಪನಿಯ ಮುಖ್ಯ ಕಚೇರಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಅವರು ಪ್ರತಿ ದಿನ 1,600 ಕಿಮೀ ದೂರ ಕ್ರಮಿಸಲಿದ್ದಾರೆ!
2023ರಿಂದ ಸ್ಟಾರ್ ಬಕ್ ನಲ್ಲಿ ಅಸ್ತಿತ್ವದಲ್ಲಿರುವ ಬಹುವಿಧ ಕಾರ್ಯನಿರ್ವಹಣೆ ನೀತಿಯನ್ವಯ, ಅವರಿಗೆ ನೀಡಿರುವ ಉದ್ಯೋಗ ನೇಮಕಾತಿ ಆಹ್ವಾನ ಪತ್ರದ ಪ್ರಕಾರ, ನಿಕೋಲ್ ಅವರು ಪ್ರತಿ ದಿನ ತಮ್ಮ ಕಚೇರಿಗೆ ಕಾರ್ಪೊರೇಟ್ ಜೆಟ್ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅವರು ಪ್ರಯಾಣ ಬೆಳೆಸದಿದ್ದಾಗಲೂ, ಸಿಯಾಟಲ್ ನಲ್ಲಿರುವ ಮುಖ್ಯ ಕಚೇರಿಯಲ್ಲಿ ವಾರಕ್ಕೆ ಮೂರು ದಿನ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.
50 ವರ್ಷ ವಯಸ್ಸಿನ ಬ್ರಿಯಾನ್ ನಿಕೋಲ್ ಅವರ ವಾರ್ಷಿಕ ಮೂಲ ವೇತನವು 1.6 ದಶಲಕ್ಷ ಡಾಲರ್ ಆಗಿದ್ದು, ತಮ್ಮ ಕಾರ್ಯನಿರ್ವಹಣೆಯನ್ನು ಆಧರಿಸಿ ವಾರ್ಷಿಕ ರೂ. 3.6 ಲಕ್ಷ ಡಾಲರ್ ನಿಂದ ರೂ. 7.2 ದಶಲಕ್ಷ ಡಾಲರ್ ವರೆಗೆ ನಗದು ಬೋನಸ್ ಪಡೆಯಲಿದ್ದಾರೆ.
ಇದಲ್ಲದೆ, ಅವರು 23 ದಶಲಕ್ಷದವರೆಗಿನ ವಾರ್ಷಿಕ ಈಕ್ವಿಟಿ ಕೊಡುಗೆಯನ್ನೂ ಪಡೆಯಲಿದ್ದಾರೆ.
ಭಾರಿ ದೂರ ಕ್ರಮಿಸುವ ವ್ಯವಸ್ಥೆಯನ್ನು ಅವರು ಇದೇ ಪ್ರಥಮ ಬಾರಿಗೆ ಪಡೆಯುತ್ತಿರುವುದಲ್ಲ. 2018ರಲ್ಲಿ ಚಿಪೋಟ್ಲೆ ಸಿಇಒ ಆಗಿದ್ದಾಗಲೂ ಅವರು ಯಶಸ್ವಿಯಾಗಿ ಇಂತಹ ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಕೊಲೊರಾಡೊದಲ್ಲಿರುವ ಚಿಪೋಟ್ಲೆಯ ಮುಖ್ಯ ಕಚೇರಿಯು ನಿಕೋಲ್ ಅವರ ಕೊನೆಯ ಉದ್ಯೋಗ ಸ್ಥಳದಿಂದ ಕೇವಲ 15 ನಿಮಿಷಗಳ ದೂರ ಹೊಂದಿತ್ತು. ಆದರೆ, ಈ ಮೆಕ್ಸಿಕನ್ ಫಾಸ್ಟ್ ಫುಡ್ ಸರಣಿ ಕಂಪನಿಯು ನಿಕೋಲ್ ನೇಮಕಾತಿಯಾದ ನಂತರ ತನ್ನ ಮುಖ್ಯ ಕಚೇರಿಯನ್ನು ಡೆನ್ವರ್ ನಿಂದ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಿಸಿತ್ತು.
“ಬ್ರಿಯಾನ್ ಅವರ ಪ್ರಾಥಮಿಕ ಕಚೇರಿಯು ಹಾಗೂ ಅವರು ಕಳೆಯಲಿರುವ ಬಹುತೇಕ ಅವಧಿಯು ನಮ್ಮ ಸಿಯಾಟಲ್ ನೆರವು ಕೇಂದ್ರ ಅಥವಾ ಜಗತ್ತಿನಾದ್ಯಂತ ಇರುವ ನಮ್ಮ ಪಾಲುದಾರರು ಮತ್ತು ಗ್ರಾಹಕರು ಭೇಟಿ ನೀಡುವ ಮಳಿಗೆಗಳು, ರೋಸ್ಟರಿಗಳು, ರೋಸ್ಟಿಂಗ್ ಸೌಲಭ್ಯಗಳು ಹಾಗೂ ಕಚೇರಿಗಳಲ್ಲಿ ಇರಲಿದೆ. ಅವರ ಅವಧಿಯು ಬಹುವಿಧ ಉದ್ಯೋಗ ಮಾರ್ಗಸೂಚಿ ಹಾಗೂ ಎಲ್ಲ ಪಾಲುದಾರರಿಗೆ ನಾವು ಹೊಂದಿರುವ ಉದ್ಯೋಗ ಸ್ಥಳ ನಿರೀಕ್ಷೆಯನ್ನು ಮೀರಲಿದೆ” ಎಂದು ಸ್ಟಾರ್ ಬಕ್ ವಕ್ತಾರರೊಬ್ಬರು CNBC ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸರಾಸರಿ ಉದ್ಯೋಗಿಗಳಿಗೆ ಹೋಲಿಸಿದರೆ, ಪ್ರಬಲವಾದ ಚೌಕಾಶಿ ಸಾಮರ್ಥ್ಯ ಹೊಂದಿರುವ ಉನ್ನತ ದರ್ಜೆಯ ಕಾರ್ಯನಿರ್ವಹಣಾಧಿಕಾರಿಗಳು ಇಂತಹ ಅನುಕೂಲಕರ ಉದ್ಯೋಗ ನಿಯಮಗಳನ್ನು ಪಡೆಯುವುದು ಸಾಮಾನ್ಯವಾಗಿದೆ.
ಗಾಯಕಿ ರಿಹಾನಾರ ಒಳ ಉಡುಪು ಬ್ರ್ಯಾಂಡ್ ಆದ ಫಂಟಿ ಎಕ್ಸ್ ಸ್ಯಾವೇಜ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಹಿಲರಿ ಸೂಪರ್ ಅವರನ್ನು ವಿಕ್ಟೋರಿಯಾಸ್ ಸೀಕ್ರೆಟ್ ತನ್ನ ಸಿಇಒ ಮಾಡಿಕೊಂಡಾಗ ಇಂತಹುದೇ ರಿಯಾಯಿತಿ ನೀಡಿತ್ತು.
ಅವರು ಓಹಿಯೊದ ಕೊಲಂಬಸ್ ನಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಯ ಬದಲು ಸಂಸ್ಥೆಯ ಕಚೇರಿಗಳಿರುವ ನ್ಯೂಯಾರ್ಕ್ ನಗರದಲ್ಲಿ ಕೆಲಸ ಮಾಡಲಿದ್ದಾರೆ. ಆದರೆ, ಎಲ್ಲ ಸಿಇಒಗಳ ವಿಚಾರದಲ್ಲೂ ಇದಾಗುವುದಿಲ್ಲ.
ಅಮೆಝಾನ್ ನ ಆ್ಯಂಡಿ ಜಸ್ಸಿ ಹಾಗೂ ಜೆಪಿ ಮೋರ್ಗನ್ ಚೇಸ್ ನ ಜಾಮಿ ಡೈಮನ್ ಅವರು ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸುವ ನೀತಿಯನ್ನು ಮರಳಿ ಜಾರಿಗೆ ತರಲು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ.
ಕಾಫಿ ಉದ್ಯಮದ ದೈತ್ಯ ಸಂಸ್ಥೆಯಾದ ಸ್ಟಾರ್ ಬಕ್ಸ್ ನ ಮಾರಾಟ ಕುಸಿಯುತ್ತಿರುವುದು ನಿಕೋಲ್ ರೊಂದಿಗೆ ಇಂತಹ ಅಸಹಜ ಒಪ್ಪಂದ ಮಾಡಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.
ಸ್ಟಾರ್ ಬಕ್ಸ್ ನ ಹಾಲಿ ಸಿಇಒ ಲಕ್ಷ್ಮಣ್ ನರಸಿಂಹನ್ ಅವಧಿಯಲ್ಲಿ ಸ್ಟಾರ್ ಬಕ್ಸ್ ನ ಎರಡು ಬೃಹತ್ ಮಾರುಕಟ್ಟೆಗಳಾದ ಅಮೆರಿಕ ಮತ್ತು ಚೀನಾದಲ್ಲಿ ಈ ವರ್ಷ ಮಾರಾಟ ಕುಸಿತಗೊಂಡಿದೆ.
ಸಮಸ್ಯೆಗೆ ಸಿಲುಕಿರುವ ಕಂಪನಿಗಳನ್ನು ಲಾಭದತ್ತ ಕೊಂಡೊಯ್ಯುವ ಬಲವಾದ ವೃತ್ತಿ ದಾಖಲೆಯನ್ನು ನಿಕೋಲ್ ಹೊಂದಿರುವುದರಿಂದ, ಯಾವುದೇ ಸಂಸ್ಥೆಯ ಉನ್ನತ ಹುದ್ದೆಗಳಿಗೆ ಅವರು ತಾರಾ ಅಭ್ಯರ್ಥಿಯಾಗಿದ್ದಾರೆ. ಅವರು ಚಿಪೋಟ್ಲ್ ಕಂಪನಿಯ ಸಿಇಒ ಆಗಿದ್ದಾಗ, ಅದರ ಷೇರು ಮೌಲ್ಯವು ಶೇ. 773ರಷ್ಟು ವೃದ್ಧಿಯಾದ ವರದಿಗಳಿವೆ.
ಸೌಜನ್ಯ: ndtv.com