ದಿಲ್ಲಿ ಸ್ಫೋಟದ ಬೆನ್ನಲ್ಲೇ ಮುಂಬೈ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡವರನ್ನು ಪ್ರಶ್ನಿಸಿದ ಪೊಲೀಸರು: ವರದಿ
► “ದೇಶದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಪೊಲೀಸರು ನನ್ನ ಮನೆಯಲ್ಲಿರುತ್ತಾರೆ” ► "ಪೊಲೀಸರು ನಮಗೆ ತೊಂದರೆ ನೀಡಲು ಈಗಲೂ ಮಾರ್ಗಗಳನ್ನು ಹುಡುಕುತ್ತಿದ್ದಾರೆ"
Photo Credit : thewire.in
ಮುಂಬೈ: ನ.10ರಂದು ದಿಲ್ಲಿಯ ಕೆಂಪು ಕೋಟೆಯ ಬಳಿ ಪ್ರಬಲ ಕಾರು ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರ ತಂಡವು ಮೀರಾ ರೋಡ್ ನಿವಾಸಿ ಮುಝಮ್ಮಿಲ್ ಅತಾವುರ್ರಹ್ಮಾನ್ ಶೇಖ್ ಅವರ ಮನೆಯನ್ನು ತಲುಪಿತ್ತು. 19 ವರ್ಷಗಳ ಕಾಲ ಜೈಲಿನಲ್ಲಿದ್ದು, ಬಾಂಬೆ ಉಚ್ಚ ನ್ಯಾಯಾಲಯದಿಂದ ಖುಲಾಸೆಗೊಂಡ ಬಳಿಕ ಎರಡು ತಿಂಗಳ ಹಿಂದಷ್ಟೇ ಮನೆಗೆ ಮರಳಿದ್ದ ಶೇಖ್ ಪೊಲೀಸರನ್ನು ಕಂಡು ದಿಗ್ಭ್ರಮೆಗೊಂಡಿದ್ದರು.
‘ಸಮೀಪದ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ವೋರ್ವರು ಬಂದು ನಾನು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಬೇಕೆಂದು ಒತ್ತಾಯಿಸಿದ್ದರು. ಅದೊಂದು ವಿಚಿತ್ರವಾದ ಬೇಡಿಕೆಯಾಗಿತ್ತು’ ಎಂದು ಶೇಖ್ ಹೇಳಿದ್ದಾರೆ. 2006ರ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು ಈ ವರ್ಷದ ಜುಲೈ 21ರಂದು ಇತರ 11 ಜನರ ಜೊತೆಗೆ ಬಿಡುಗಡೆಗೊಂಡಿದ್ದರು.
ಪೊಲೀಸರು ಮನೆ ಬಾಗಿಲಿಗೆ ಬರುವವರೆಗೂ ಶೇಖ್ ಅವರಿಗೆ ದಿಲ್ಲಿ ಸ್ಫೋಟದ ಬಗ್ಗೆ ಗೊತ್ತಿರಲಿಲ್ಲ ಎಂದು thewire.in ವರದಿ ಮಾಡಿದೆ.
‘ಪ್ರಕರಣದಲ್ಲಿಯ ನನ್ನ ಸಹ ಆರೋಪಿಗಳಿಗೆ ಕರೆ ಮಾಡಿದಾಗ, ಪೊಲೀಸರು ತಮ್ಮ ಮನೆಗಳಿಗೂ ಬಂದಿದ್ದಾರೆ ಎಂದು ಅವರು ತಿಳಿಸಿದ್ದರು. ಆಗಲೇ ನನಗೆ ದಿಲ್ಲಿ ಸ್ಫೋಟದ ಬಗ್ಗೆ ಗೊತ್ತಾಗಿತ್ತು’ ಎಂದು ಶೇಖ್ ಹೇಳಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶೇಖ್ 2006ರಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್) ತನ್ನನ್ನು ಬಂಧಿಸುವ ಮುನ್ನ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರ ಭೇಟಿ ಅಲ್ಪಕಾಲಿಕವಾಗಿದ್ದರೂ ಅದು ಹಿಂದಿನ ದಾಳಿಗಳನ್ನು ನೆನಪಿಸಿತ್ತು ಎಂದ ಶೇಖ್ , ‘ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು, ಸುಮಾರು ಎರಡು ದಶಕಗಳ ಕಾಲ ಜೈಲಿನಲ್ಲಿ ಕೊಳೆತಿದ್ದೆವು. ಪೊಲೀಸರು ನಮಗೆ ತೊಂದರೆ ನೀಡಲು ಈಗಲೂ ಮಾರ್ಗಗಳನ್ನು ಹುಡುಕುತ್ತಿದ್ದಾರೆ’ ಎಂದರು. ತನ್ನ ಮನೆಗೆ ಪೊಲೀಸರ ಭೇಟಿಯ ಬೆನ್ನಲ್ಲೇ ಅವರು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ಪತ್ರಗಳನ್ನು ಕಳುಹಿಸಿದ್ದರು.
ಇದೇ ಸಮಯ ಮತ್ತೊಂದು ಪೊಲೀಸ್ ತಂಡವು ಸಮೀಪದ ಸಾಜಿದ್ ಅನ್ಸಾರಿ ಮನೆಗೆ ಭೇಟಿ ನೀಡಿತ್ತು. ಮೊಬೈಲ್ ಫೋನ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದ ಅನ್ಸಾರಿಯ ವಿರುದ್ಧ ಬಾಂಬ್ ಸ್ಫೋಟಗಳಿಗಾಗಿ ಸರ್ಕ್ಯೂಟ್ ಗಳನ್ನು ಸಿದ್ಧಪಡಿಸಿದ್ದ ಆರೋಪವನ್ನು ಹೊರಿಸಲಾಗಿತ್ತು. 2006,ಜು.11ರಂದು ಮುಂಬೈನ ವೆಸ್ಟರ್ನ್ ಲೈನ್‌ನಲ್ಲಿ ವಿವಿಧ ಲೋಕಲ್ ರೈಲುಗಳಲ್ಲಿ ಹಲವಾರು ಬಾಂಬ್ ಗಳು ಸ್ಫೋಟಿಸಿದ್ದು, 189 ಜನರು ಮೃತಪಟ್ಟಿದ್ದರು. 19 ವರ್ಷಗಳ ಜೈಲುವಾಸ ಅನುಭವಿಸಿದ್ದ ಅನ್ಸಾರಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಇತರ 11 ಜನರೊಂದಿಗೆ ಬಿಡುಗಡೆಗೊಳಿಸಿತ್ತು.
ನಂತರದ ದಿನಗಳಲ್ಲಿ ಮಹಾರಾಷ್ಟ್ರ ಪೊಲೀಸರು ಮುಂಬೈನ ಹಲವಾರು ಉಪನಗರಗಳು ಮತ್ತು ಜಳಗಾಂವ್ ನಲ್ಲಿಯ ಖುಲಾಸೆಗೊಂಡಿದ್ದ ಬಹುತೇಕ ಎಲ್ಲರ ಮನೆಗಳಿಗೆ ಭೇಟಿ ನೀಡಿದ್ದರು. ಪೊಲೀಸರ ಬಳಿ ಅಗತ್ಯ ನ್ಯಾಯಾಲಯದ ಆದೇಶ ಅಥವಾ ಯಾವುದೇ ಕಾನೂನು ದಾಖಲೆಗಳಿಲ್ಲದೇ ಅವರ ಮನೆಗಳ ಬಾಗಿಲುಗಳನ್ನು ತಟ್ಟಿದ್ದರು.
ಪೊಲೀಸರ ಭೇಟಿ ನೀಡುವುದು ಪ್ರಕರಣದಲ್ಲಿ ಬಂಧಿಸಲ್ಪಟ್ಟವರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪ್ರಕರಣದಲ್ಲಿ ‘ಪ್ರಮುಖ ಸಾಕ್ಷಿ’ ಎಂದು ತೋರಿಸಲಾಗಿದ್ದ ಮತ್ತು ನಂತರ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಕಂಪ್ಯೂಟರ್ ಇಂಜಿನಿಯರ್ ಓರ್ವರು ಕೂಡಾ ಪೊಲೀಸರಿಂದ ಕಿರುಕುಳ ಅನುಭವಿಸಿದ್ದಾಗಿ ಆರೋಪಿಸಿದ್ದಾರೆ.
‘ದೇಶದಲ್ಲಿ ಎಲ್ಲಿಯೇ ಭಯೋತ್ಪಾದಕ ದಾಳಿ ನಡೆದಲೂ ಪ್ರತಿ ಸಲವೂ ಪೊಲೀಸರು ನನ್ನ ಮನೆಯಲ್ಲಿರುತ್ತಾರೆ. ದಿಲ್ಲಿ ಸ್ಫೋಟದ ನಂತರ ನಸುಕಿನ 2:30 ಗಂಟೆಗೆ ಮುಂಬೈ ಪೊಲೀಸರ ತಂಡವು ನನ್ನ ಮನೆಗೆ ಬಂದಿತ್ತು’ ಎಂದು ಅವರು ಹೇಳಿದರು. ಅವರೂ ಈ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಬಿಡುಗಡೆಗೊಂಡವರ ಪೈಕಿ ಹಲವರು ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಪೊಲೀಸರು ಅನಪೇಕ್ಷಿತ ಭೇಟಿಗಳನ್ನು ನೀಡಿದಾಗ ಅವರ ಕಿರುಕುಳ ಮತ್ತು ತಮ್ಮ ಮನೆಗೆ ಪೊಲೀಸ್ ಭೇಟಿ ನೀಡಿದ್ದಕ್ಕೆ ತಮ್ಮ ಬಳಿ ಕನಿಷ್ಠ ಪುರಾವೆಯಾದರೂ ಇರುತ್ತದೆ ಎಂದು ಅವರು ಭಾವಿಸಿದ್ದಾರೆ.
ದೇಶದಲ್ಲಿ ಎಲ್ಲಿಯೇ ಸ್ಫೋಟ ಸಂಭವಿಸಿದರೂ ಪೊಲೀಸರು ತಮ್ಮ ಮನೆಗಳಿಗೆ ಬರುತ್ತಾರೆ. ಇದು ದೀರ್ಘ ಜೈಲುವಾಸದ ಬಳಿಕ ಬದುಕನ್ನು ಮರುರೂಪಿಸಿಕೊಳ್ಳುವ ತಮ್ಮ ಪ್ರಯತ್ನಗಳಿಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
ಕೃಪೆ : thewire.in