ಅರುಣಾಚಲದ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ: ಕುಟುಂಬದ ಆರೋಪ
Photo Credit : NDTV
ಇಟಾನಗರ್, ನ. 6: ಅರುಣಾಚಲಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಸೈನಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಯ ಸಾವಿನ ಕುರಿತಂತೆ ಹೊಸ ಆರೋಪಗಳು ಕೇಳಿ ಬಂದಿವೆ. ಹಿರಿಯ ವಿದ್ಯಾರ್ಥಿಗಳು ಆತನಿಗೆ ಕಿರುಕುಳ ಹಾಗೂ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೃತನ ಸಹೋದರಿ ಆರೋಪಿಸಿದ್ದಾರೆ.
ಬಾಲಕನ ಮೃತದೇಹ ನಿಗ್ಲೋಕ್‌ನಲ್ಲಿರುವ ಶಾಲೆಯ ಆವರಣದಲ್ಲಿ ನವೆಂಬರ್ 1ರಂದು ಪತ್ತೆಯಾಗಿತ್ತು.
ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಮೃತ ಬಾಲಕನ ಸಹೋದರಿ, ಮಿಸ್ ಅರುಣಾಚಲ 2024, ತಡು ಲುನಿಯಾ, ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಆತ ಆತ್ಮಹತ್ಯೆಗೆ ಶರಣಾಗಲು ಪ್ರೇರೇಪಿಸಿದ ಘಟನೆಗಳ ಬಗ್ಗೆ ಆತನ ವಸತಿ ನಿಲಯದ ಸಹಪಾಠಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಕ್ಟೋಬರ್ 31ರಂದು ರಾತ್ರಿ 10ನೇ ತರಗತಿಯ 8 ವಿದ್ಯಾರ್ಥಿಗಳು ಹಾಗೂ 8ನೇ ತರಗತಿಯ 3 ವಿದ್ಯಾರ್ಥಿಗಳ ಗುಂಪು 7ನೇ ತರಗತಿ ವಿದ್ಯಾರ್ಥಿಯ ವಸತಿ ನಿಲಯಕ್ಕೆ ಪ್ರವೇಶಿಸಿತು. ಈ ಸಂದರ್ಭ ಅಲ್ಲಿ ವಾರ್ಡನ್ ಇರಲಿಲ್ಲ ಎಂದು ಆತನ ಸಹಪಾಠಿಗಳಿಂದ ಕುಟುಂಬಕ್ಕೆ ತಿಳಿದು ಬಂತು ಎಂದು ಲುನಿಯಾ ಹೇಳಿದ್ದಾರೆ.
ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಲ್ಲಿ ತನ್ನ ಸಹೋದರನ ಮುಖವನ್ನು ಮುಚ್ಚಲು ಬಲವಂತಪಡಿಸಿದರು ಹಾಗೂ ಆತನನ್ನು ಒಬ್ಬಂಟಿಯಾಗಿ 10ನೇ ತರಗತಿಯ ವಸತಿ ನಿಲಯಕ್ಕೆ ಕರೆದೊಯ್ದರು ಎಂದು ಅವರು ಹೇಳಿದ್ದಾರೆ ಎಂದು ಲುನಿಯಾ ತಿಳಿಸಿದ್ದಾರೆ.
ಮುಚ್ಚಿದ ಬಾಗಿಲಿನ ಹಿಂದೆ ಏನು ನಡೆದಿದೆ ಎಂದು ಯಾರಿಗೂ ತಿಳಿದಿಲ್ಲ. ರಾತ್ರಿಯಿಡೀ ತನ್ನ ಸಹೋದರನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪುಸ್ತಕವೊಂದು ಕಾಣೆಯಾದ ಹಿನ್ನೆಲೆಯಲ್ಲಿ ಆತನಿಗೆ ಕಳ್ಳನ ಹಣೆಪಟ್ಟಿ ನೀಡಲಾಗಿತ್ತು ಹಾಗೂ ಶಾಲೆಯ ಸಭೆ ಸಂದರ್ಭ ಸಾರ್ವಜನಿಕವಾಗಿ ಅವಮಾನಿಸಲಾಗುವುದು ಎಂದು ವೀಡಿಯೊ ರೆಕಾರ್ಡಿಂಗ್ ಮೂಲಕ ಬೆದರಿಕೆ ಒಡ್ಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ತನಿಖಾಧಿಕಾರಿ ಪರಿಶೀಲಿಸಿದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳಲ್ಲಿ ತನ್ನ ಸಹೋದರ ಬೆಳಗ್ಗೆ 4.45ಕ್ಕೆ ವಸತಿ ನಿಲಯದ ಸುತ್ತ ಉದ್ವಿಗ್ನತೆಯಿಂದ ಓಡಾಡುತ್ತಿರುವುದು ಹಾಗೂ ಸುಸೈಡ್ ನೋಟ್ ಬರೆಯಲು ತರಗತಿ ಪ್ರವೇಶಿಸುತ್ತಿರುವುದು ಕಂಡು ಬಂದಿದೆ ಎಂದು ಲುನಿಯಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ 8 ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ಪಸಿಘಾಟ್‌ನಲ್ಲಿರುವ ಬಾಲ ನ್ಯಾಯ ಮಂಡಳಿ ಮುಂದೆ ಬುಧವಾರ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.