ಸುಪ್ರೀಂಕೋರ್ಟ್ ನ ಪರಿಶಿಷ್ಠ ಸಿಬ್ಬಂದಿ ನೇಮಕಾತಿ, ಭಡ್ತಿಗೆ ನೂತನ ಮೀಸಲಾತಿ ನೀತಿ ಜಾರಿ
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ಪ್ರಪ್ರಥಮ ಬಾರಿಗೆ ಸುಪ್ರೀಂಕೋರ್ಟ್, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ತನ್ನ ಸಿಬ್ಬಂದಿಯ ನೇರ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿ ಔಪಚಾರಿಕ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ.
ಜೂನ್ 24ರಂದು ಹೊರಡಿಸಿದ ಸುತ್ತೋಲೆಯೊಂದರಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರವನ್ನು ತನ್ನ ಎಲ್ಲಾ ಉದ್ಯೋಗಿಗಳಿಗೆ ತಿಳಿಸಿದೆ.
‘‘ಸಕ್ಷಮ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಮಾದರಿ ಮೀಸಲಾತಿ ರೋಸ್ಟರ್ ಹಾಗೂ ನೋಂದಣಿಗೆ ಸಂಬಂಧಿಸಿದ ಮಾಹಿತಿಯನ್ನು ಸುಪ್ನೆಟ್ (ಸುಪ್ರೀಂಕೋರ್ಟ್ನ ಇಮೇಲ್ ಜಾಲ)ನಲ್ಲಿ ಅಪ್ಲೋಡ್ ಮಾಡಲಾಗಿದೆ ಹಾಗೂ ನೂತನ ನೀತಿಯು 2025ರ ಜೂನ್ 23ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ’’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರೋಸ್ಟರ್ ಅಥವಾ ನೋಂದಣಿಯಲ್ಲಿರುವ ಲೋಪಗಳು ಹಾಗೂ ನಿಖರತೆಯಿಲ್ಲದಿರುವ ಕುರಿತು ಯಾವುದೇ ಸಿಬ್ಬಂದಿಗೆ ಆಕ್ಷೇಪ ಹಾಗೂ ಅಹವಾಲುಗಳಿದ್ದಲ್ಲಿ ಅವರು ಅದನ್ನು ರಿಜಿಸ್ಟ್ರಾರ್ (ನೇಮಕಾತಿ) ಅವರಿಗೆ ತಿಳಿಸಬಹುದಾಗಿದೆ’’ ಎಂದು ಸುತ್ತೋಲೆ ತಿಳಿಸಿದೆ.
ಸುತ್ತೋಲೆ ಹಾಗೂ ಮಾದರಿ ರೋಸ್ಟರ್ ಪ್ರಕಾರ, ನೂತನ ಮೀಸಲಾತಿ ನೀತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಸರ್ವೋಚ್ಚ ನ್ಯಾಯಾಲಯದ ಪರಿಶಿಷ್ಠ ಜಾತಿ(ಎಸ್ಸಿ)ಯ ನೌಕರರಿಗೆ ಶೇ.15 ಹಾಗೂ ಪರಿಶಿಷ್ಠ ಪಂಗಡ (ಎಸ್ಟಿ)ದ ಉದ್ಯೋಗಿಗಳಿಗೆ ಶೇ.7.5ರಷ್ಟು ಮೀಸಲಾತಿ ಕೋಟಾ ಇರಲಿದೆ.
ನೂತನ ಕೋಟಾ ಸೌಲಭ್ಯಗಳು ರಿಜಿಸ್ಟ್ರಾರ್ಗಳು, ಹಿರಿಯ ಆಪ್ತ ಸಹಾಯಕರು, ಸಹಾಯಕ ಲೈಬ್ರೆರಿಯನ್ಗಳು, ಜೂನಿಯರ್ ಕೋರ್ಟ್ ಸಹಾಯಕರ ಹಾಗೂ ಕೊಠಡಿ ಪರಿಚಾರಕರಿಗೆ ಲಭ್ಯವಾಗಲಿದೆ.