ಬಿಹಾರದ ಮತದಾರರ ಕರಡು ಪಟ್ಟಿಯಲ್ಲಿ ʼಮೃತಪಟ್ಟವರುʼ ಸುಪ್ರೀಂ ಕೋರ್ಟ್ ಮುಂದೆ ಹಾಜರು!
ಸುಪ್ರೀಂ ಕೋರ್ಟ್ ಮುಂದೆ ಸ್ವತಃ ವಾದ ಮಂಡಿಸಿದ ಯೋಗೇಂದ್ರ ಯಾದವ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಆ.12: ಬಿಹಾರದಲ್ಲಿ ನಡೆದ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ʼಮೃತಪಟ್ಟಿದ್ದಾರೆʼ ಎಂದು ಘೋಷಿಸಲಾದ ಇಬ್ಬರು ವ್ಯಕ್ತಿಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ಯೋಗೇಂದ್ರ ಯಾದವ್ ಅವರು ಬಿಹಾರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಅಳಿಸಲಾಗಿದೆ. ಭಾರತದ ಇತಿಹಾಸದಲ್ಲಿ ಎಂದಿಗೂ ಇದು ಸಂಭವಿಸಿಲ್ಲ ಎಂದು ಗಂಭೀರ ಆರೋಪ ಮಾಡಿದರು.
“ಇದು ವಿಶ್ವದ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾರರ ಹಕ್ಕು ನಿರಾಕರಣೆ. ಪಟ್ಟಿಯಿಂದ ಹೊರಗಿಡಲಾದ ಮತದಾರರ ಸಂಖ್ಯೆ ಒಂದು ಕೋಟಿ ದಾಟುವುದು ಖಚಿತ. ಇದು ಪರಿಷ್ಕರಣೆಯ ವಿಷಯವಲ್ಲ. ದಯವಿಟ್ಟು ಅವರನ್ನು ನೋಡಿ. ಅವರನ್ನು ಸತ್ತಿದ್ದಾರೆಂದು ಕರಡು ಮತದಾರರ ಪಟ್ಟಿಯಲ್ಲಿ ಘೋಷಿಸಲಾಗಿದೆ. ಆದರೆ ಅವರು ಜೀವಂತವಾಗಿದ್ದಾರೆ”, ಎಂದು ಯೋಗೇಂದ್ರ ಯಾದವ್ ಅವರು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದ ಗಮನಕ್ಕೆ ತಂದರು.
ಎಸ್ಐಆರ್ ನಂತರ ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ 65 ಲಕ್ಷ ಮತದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಸಮಿತಿಗೆ ನಿರ್ದೇಶಿಸುವಂತೆ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೋರಿತ್ತು.
ಈ ಪ್ರಕರಣದ ಅರ್ಜಿದಾರರಲ್ಲಿ ಯೋಗೇಂದ್ರ ಯಾದವ್ ಕೂಡ ಒಬ್ಬರು. ಅವರೇ ಸ್ವತಃ ವಾದ ಮಂಡಿಸಿ ಗಮನ ಸೆಳೆದರು.
ವಿಚಾರಣೆಯ ವೇಳೆ, ಮತದಾರರ ಕರಡು ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಇಬ್ಬರು ವ್ಯಕ್ತಿಗಳು ಸುಪ್ರೀಂ ಕೋರ್ಟ್ ಮುಂದೆ ಹಾಜರಾದಾಗ, ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು “ಇದೇನು ನಾಟಕವೆ?, ಟಿವಿ ಸೀರಿಯಲ್ ಗಳಲ್ಲಿ ಇದನ್ನು ನೋಡುತ್ತಿದ್ದೆವು. ಇದು ನ್ಯಾಯಾಲಯದೊಳಗೆ ಸೂಕ್ತವಲ್ಲ” , ಎಂದು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯಿಸಿದರು.
"ಮತದಾರರ ವ್ಯಾಪಕ ಹೊರಗಿಡುವಿಕೆ ಈಗಾಗಲೇ ಬಿಹಾರದಿಂದ ಪ್ರಾರಂಭವಾಗಿದೆ. ಈಗಾಗಲೇ 65 ಲಕ್ಷಕ್ಕಿಂತ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಎಸ್ಐಆರ್ ಅನುಷ್ಠಾನದ ವೈಫಲ್ಯವಲ್ಲ. ಎಸ್ಐಆರ್ ಅನ್ನು ಎಲ್ಲಿ ಕಾರ್ಯಗತಗೊಳಿಸಿದರೂ ಫಲಿತಾಂಶವು ಒಂದೇ ಆಗಿರುತ್ತದೆ”, ಎಂದು ಯೋಗೇಂದ್ರ ಯಾದವ್ ವಾದ ಮಂಡಿಸಿದರು.
ಕೇಂದ್ರ ಚುನಾವಣಾ ಸಮಿತಿಯು ಕೊನೆಯ ಬಾರಿಗೆ ಮತದಾರರ ತೀವ್ರ ಪರಿಷ್ಕಕರಣೆಯನ್ನು 2003ರಲ್ಲಿ ನಡೆಸಿದಾಗ, ಅದರ ಪರಿಣಾಮದ ಅಧ್ಯಯನವನ್ನು ಮಾಡಲಾಗಿದೆಯೇ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಯೋಗೇಂದ್ರ ಯಾದವ್, "ಯಾವುದೇ ಹೋಲಿಕೆ ಮಾಡಲಾಗಿಲ್ಲ. ಈ ದೇಶದ ಇತಿಹಾಸದಲ್ಲಿ ಎಂದಿಗೂ ಜನರು ತಮ್ಮ ದಾಖಲೆ ನಮೂನೆಗಳನ್ನು ಪರಿಷ್ಕರಣೆ ಮಾಡುವಂತೆ ಕೇಳಿಲ್ಲ. 2003ರಲ್ಲಿ ಈ ರೀತಿ ಮಾಡಿದ್ದರೆ, ಅದನ್ನು ಉಲ್ಲೇಖಿಸಬೇಕು”, ಎಂದರು.
ಭಾರತದ ಚುನಾವಣಾ ಇತಿಹಾಸದಲ್ಲಿ ಮತದಾರರ ಪಟ್ಟಿಗೆ ಶೂನ್ಯ ಸೇರ್ಪಡೆಯೊಂದಿಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿರುವುದು ಇದೇ ಮೊದಲು ಎಂದು ಯಾದವ್ ಹೇಳಿದರು.
ಇಬ್ಬರು ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುವುದು ಅಜಾಗರೂಕತೆಯಿಂದಾದ ಲೋಪವಾಗಿರಬಹುದು. ಇದನ್ನು ಸರಿಪಡಿಸಬಹುದು. ಆದರೆ, ನೀವು ಹೇಳಿರುವ ಅಂಶಗಳು ಗಂಭೀರವಾದುದು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು ಎಂದು bar and bench ವರದಿ ಮಾಡಿದೆ.
ಬಿಹಾರದಲ್ಲಿ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆಯ ವೇಳೆ 31 ಲಕ್ಷ ಮಹಿಳಾ ಮತದಾರರು ಮತ್ತು 25 ಲಕ್ಷ ಪುರುಷ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಅಳಿಸಲಾಗಿದೆ ಎಂದು ಯೋಗೇಂದ್ರ ಯಾದವ್ ಸುಪ್ರೀಂ ಪೀಠದ ಗಮನಕ್ಕೆ ತಂದರು.
ಅರ್ಜಿಯ ಮುಂದಿನ ವಿಚಾರಣೆ ಆ.13 ರಂದು ನಡೆಯಲಿದೆ.