×
Ad

ಅಕೋಲಾ ಗಲಭೆ ಪ್ರಕರಣ: ಹಿಂದೂ, ಮುಸ್ಲಿಮ್ ಪೋಲಿಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚನೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

Update: 2025-11-12 16:44 IST

ಸುಪ್ರೀಂಕೋರ್ಟ್ | Photo Credit : sci.gov.in

ಹೊಸದಿಲ್ಲಿ: 2023ರ ಅಕೋಲಾ ಕೋಮು ಘರ್ಷಣೆಗಳ ಸಂದರ್ಭದಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆಗಾಗಿ ಹಿಂದೂ ಮತ್ತು ಮುಸ್ಲಿಮ್ ಪೋಲಿಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಎರಡು ತಿಂಗಳ ಹಿಂದೆ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಈ ಆದೇಶಕ್ಕೆ ತಡೆಯನ್ನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಮತ್ತು ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ಪೀಠವು ರಾಜ್ಯ ಸರಕಾರವು ಸಲ್ಲಿಸಿರುವ ಪುನರ್‌ಪರಿಶೀಲನಾ ಅರ್ಜಿಯ ಕುರಿತು ನೋಟಿಸ್‌ಗಳನ್ನು ಹೊರಡಿಸಿತು. ನ್ಯಾಯಾಲಯವು ನಾಲ್ಕು ವಾರಗಳ ಬಳಿಕ ಅರ್ಜಿಯ ವಿಚಾರಣೆ ನಡೆಸಲಿದೆ.

ಸೆ.11ರಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಎಸ್.ಸಿ.ಶರ್ಮಾ ಅವರ ಪೀಠವು ಪುನರ್‌ಪರಿಶೀಲನಾ ಅರ್ಜಿಯ ಕುರಿತು ಭಿನ್ನ ತೀರ್ಪುಗಳನ್ನು ಪ್ರಕಟಿಸಿದ ಬಳಿಕ ವಿಷಯವು ಮೂವರು ನ್ಯಾಯಾಧೀಶರ ಪೀಠದ ಮುಂದೆ ಬಂದಿದೆ.

ಸೆ.11ರ ತೀರ್ಪನ್ನು ಬರೆದಿದ್ದ ನ್ಯಾ.ಕುಮಾರ್ ಅವರು ಪುನರ್‌ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದರೆ ನ್ಯಾ.ಶರ್ಮಾ ಅವರು,ಧಾರ್ಮಿಕ ಗುರುತಿನ ಆಧಾರದಲ್ಲಿ ಎಸ್‌ಐಟಿ ರಚನೆಯ ಪ್ರಶ್ನೆಗೆ ‘ಪರಿಗಣನೆಯ ಅಗತ್ಯವಿದೆ’ ಎಂದು ಹೇಳಿದ್ದರು.

ಮಂಗಳವಾರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಎಸ್‌ಐಟಿ ಸದಸ್ಯರನ್ನು ನ್ಯಾಯಾಲಯವು ಆಯ್ಕೆ ಮಾಡಬಹುದು ಎಂದು ಪೀಠಕ್ಕೆ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯವು ಸೆ.11ರ ಆದೇಶದಲ್ಲಿ ನಿರ್ದೇಶಿಸಿತ್ತಾದರೂ ಅರ್ಜಿದಾರರು ಯಾವುದೇ ಮನವಿಯನ್ನು ಮಾಡಿಕೊಂಡಿಲ್ಲ ಎಂದೂ ಅವರು ಹೇಳಿದರು.

ಈ ನಡುವೆ ಪರಿಶೀಲನೆಯಲ್ಲಿರುವ ತೀರ್ಪಿನ ಪ್ಯಾರಾ 24ಕ್ಕೆ (ಸಂಬಂಧಿತ ನಿರ್ದೇಶನವನ್ನು ಒಳಗೊಂಡಿರುವ) ತಡೆಯನ್ನು ವಿಧಿಸಲಾಗುವುದು ಎಂದು ಮು.ನ್ಯಾ.ಗವಾಯಿ ನೇತೃತ್ವದ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಸೆ.11ರಂದು ಮುಹಮ್ಮದ್ ಅಫ್ಝಲ್ ಮುಹಮ್ಮದ್ ಶರೀಫ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಮೂರ್ತಿಗಳಾದ ಕುಮಾರ ಮತ್ತು ಶರ್ಮಾ ಅವರ ಪೀಠವು,13-5-2023ರಂದು ಅರ್ಜಿದಾರರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿಂತೆ ಎಫ್‌ಐಆರ್ ದಾಖಲಿಸುವ ಮೂಲಕ ಅವರು ಮಾಡಿರುವ ಎಲ್ಲ ಆರೋಪಗಳ ಕುರಿತು ತನಿಖೆಯನ್ನು ನಡೆಸಲು ಹಿರಿಯ ಹಿಂದೂ ಮತ್ತು ಮುಸ್ಲಿಮ್ ಪೋಲಿಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.

ಮೇ 2023ರಲ್ಲಿ ಪ್ರವಾದಿಯವರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯ ಪೋಸ್ಟ್ ವೈರಲ್ ಆದ ಬಳಿಕ ಅಕೋಲಾದ ಹಳೇ ನಗರ ಪ್ರದೇಶದಲ್ಲಿ ಘರ್ಷಣೆಗಳು ಸಂಭವಿಸಿದ್ದವು. ವಿಲಾಸ ಮಹಾದೇವರಾವ್ ಗಾಯಕ್ವಾಡ್ ಎಂಬವರು ಮೃತಪಟ್ಟಿದ್ದರು ಮತ್ತು ಎಂಟು ಜನರು ಗಾಯಗೊಂಡಿದ್ದರು. ಶರೀಫ್ ಪ್ರಕಾರ ನಾಲ್ವರು ಗಾಯಕ್ವಾಡ್ ಮೇಲೆ ಖಡ್ಗ, ಕಬ್ಬಿಣದ ಪೈಪ್ ಮತ್ತು ಇತರ ವಸ್ತುಗಳಿಂದ ದಾಳಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News