×
Ad

ಡಿಜಿಟಲ್ ಬಂಧನಗಳ ಕುರಿತು ಏಕೀಕೃತ, ರಾಷ್ಟ್ರವ್ಯಾಪಿ ತನಿಖೆಯನ್ನು ಸಿಬಿಐಗೆ ವಹಿಸಿದ ಸುಪ್ರೀಂ ಕೋರ್ಟ್

Update: 2025-12-01 17:56 IST

ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ,ಡಿ.1: ಹೆಚ್ಚುತ್ತಿರುವ ಡಿಜಿಟಲ್ ಬಂಧನ ಪ್ರಕರಣಗಳ ಕುರಿತು ಏಕೀಕೃತ ರಾಷ್ಟ್ರವ್ಯಾಪಿ ತನಿಖೆಯನ್ನು ಸೋಮವಾರ ಸಿಬಿಐಗೆ ವಹಿಸಿಕೊಟ್ಟಿರುವ ಸರ್ವೋಚ್ಚ ನ್ಯಾಯಾಲಯವು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ.

ಆರ್‌ಬಿಐಗೆ ನೋಟಿಸನ್ನೂ ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು, ಸೈಬರ್ ವಂಚನೆ ಪ್ರಕರಣಗಳಲ್ಲಿ ಬಳಸಲಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಅಥವಾ ಮಷಿನ್ ಲರ್ನಿಂಗ್ (ಯಂತ್ರ ಕಲಿಕೆ) ತಂತ್ರಜ್ಞಾನವನ್ನು ಏಕೆ ಉಪಯೋಗಿಸಲಿಲ್ಲ ಎನ್ನುವುದಕ್ಕೆ ಉತ್ತರಿಸುವಂತೆ ಸೂಚಿಸಿದೆ.

ಸಿಬಿಐ ಜೊತೆ ಉತ್ತಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಪೀಠವು ಇಂತಹ ಆನ್‌ಲೈನ್ ಅಪರಾಧಗಳನ್ನು ಎದುರಿಸಲು ಪ್ರಾದೇಶಿಕ ಮತ್ತು ರಾಜ್ಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.

ಹರ್ಯಾಣದ ವೃದ್ಧ ದಂಪತಿಗಳ ದೂರಿನ ಮೇರೆಗೆ ದಾಖಲಾದ ಸ್ವಯಂಪ್ರೇರಿತ ಪ್ರಕರಣದಲ್ಲಿ ಈ ನಿರ್ದೇಶನಗಳನ್ನು ಹೊರಡಿಸಿದ ಸರ್ವೋಚ್ಚ ನ್ಯಾಯಾಲಯವು, ಸೈಬರ್ ಅಪರಾಧಿಗಳು ಹೆಚ್ಚಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಕಷ್ಟಪಟ್ಟು ಗಳಿಸಿದ ಹಣವನ್ನು ದೋಚುತ್ತಿದ್ದಾರೆ ಎಂದು ಹೇಳಿತು.

ಡಿಜಿಟಲ್ ಬಂಧನ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಸಿಬಿಐಗೆ ವಿವರಗಳು ಮತ್ತು ಸಹಕಾರವನ್ನು ಒದಗಿಸುವಂತೆ ಅದು ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಸಂಸ್ಥೆಗಳಿಗೆ ನಿರ್ದೇಶನ ನೀಡಿತು.

ಸಾಗರೋತ್ತರ ತೆರಿಗೆ ಸ್ವರ್ಗ ದೇಶಗಳಿಂದ ಕಾರ್ಯಾಚರಿಸುತ್ತಿರುವ ಸೈಬರ್ ಅಪರಾಧಿಗಳನ್ನು ತಲುಪಲು ಇಂಟರ್‌ಪೋಲ್ ನೆರವು ಪಡೆಯುವಂತೆಯೂ ಪೀಠವು ಸಿಬಿಐಗೆ ನಿರ್ದೇಶನ ನೀಡಿತು.

ಟೆಲಿಕಾಂ ಸೇವೆ ಪೂರೈಕೆದಾರರು ಓರ್ವ ಬಳಕೆದಾರ ಅಥವಾ ಸಂಸ್ಥೆಗೆ ಹಲವಾರು ಸಿಮ್ ಕಾರ್ಡ್‌ಗಳನ್ನು ಒದಗಿಸದಂತೆ ನೋಡಿಕೊಳ್ಳಲು ದೂರಸಂಪರ್ಕ ಇಲಾಖೆಗೆ ಸೂಚಿಸಿದ ಪೀಠವು, ಇಂತಹ ಸಿಮ್‌ಗಳು ಸೈಬರ್ ಅಪರಾಧಗಳಲ್ಲಿ ಬಳಕೆಯಾಗಬಹುದು ಎಂದು ಬೆಟ್ಟು ಮಾಡಿತು.

ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಗೃಹ ಸಚಿವಾಲಯ, ದೂರ ಸಂಪರ್ಕ ಇಲಾಖೆ, ವಿತ್ತ ಸಚಿವಾಲಯ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ವಿವಿಧ ಕೇಂದ್ರ ಸಚಿವಾಲಯಗಳ ಅಭಿಪ್ರಾಯಗಳನ್ನು ತನ್ನ ಮುಂದೆ ಮಂಡಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಪೀಠವು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು.

ನಾಗರಿಕರನ್ನು ವಂಚಿಸಲು ಬಳಕೆಯಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸಿಬಿಐ ಜೊತೆಗೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪೊಲೀಸ್‌ ಇಲಾಖೆಗಳು ಸ್ವತಂತ್ರವಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

ವಂಚಕರೊಂದಿಗೆ ಶಾಮೀಲಾಗಿ ನಾಗರಿಕರನ್ನು ವಂಚಿಸಲು ಮ್ಯೂಲ್ ಖಾತೆಗಳನ್ನು (ಬೇರೆಯವರ ಹೆಸರಿನಲ್ಲಿರುವ ಖಾತೆಗಳು) ನಿರ್ವಹಿಸಿಲು ಅವರಿಗೆ ನೆರವಾಗುವ ಬ್ಯಾಂಕ್ ಅಧಿಕಾರಿಗಳ ತನಿಖೆ ನಡೆಸುವಂತೆಯೂ ಪೀಠವು ಸಿಬಿಐಗೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News