54,000 ಕೋಟಿ ರೂ. ಡಿಜಿಟಲ್ ವಂಚನೆ ‘ಡಕಾಯಿತಿಗೆ ಸಮಾನ’: ಸುಪ್ರೀಂ ಕೋರ್ಟ್ ಕಳವಳ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: 54,000 ಕೋಟಿ ರೂ. ಮೌಲ್ಯದ ಡಿಜಿಟಲ್ ವಂಚನೆಯನ್ನು ನಿಶ್ಚಿತವಾಗಿ ದರೋಡೆ ಮತ್ತು ಡಕಾಯಿತಿ ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, RBI, ಬ್ಯಾಂಕ್‌ಗಳು ಹಾಗೂ ದೂರಸಂಪರ್ಕ ಇಲಾಖೆಯಂತಹ ಸಂಬಂಧಿತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಇಂತಹ ಪ್ರಕರಣಗಳನ್ನು ನಿಭಾಯಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಕರಡನ್ನು ರೂಪಿಸಬೇಕು ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜೋಯ್ ಮಲ್ಯ ಬಾಗ್ಚಿ ಮತ್ತು ನ್ಯಾ. ಎನ್.ವಿ. ಅಂಜಾರಿಯಾರನ್ನೊಳಗೊಂಡ ನ್ಯಾಯಪೀಠ, ಡಿಜಿಟಲ್ ವಂಚನೆಯಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿರುವ ಮೊತ್ತವು ಹಲವು ಸಣ್ಣ ರಾಜ್ಯಗಳ ಬಜೆಟ್‌ಗಿಂತ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿತು.
ಇಂತಹ ಅಪರಾಧಗಳು ಬ್ಯಾಂಕ್ ಅಧಿಕಾರಿಗಳು ಕೈಮಿಲಾಯಿಸಿರುವುದರಿಂದ ಅಥವಾ ನಿರ್ಲಕ್ಷ್ಯದಿಂದ ನಡೆಯುತ್ತಿವೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ, ಇಂತಹ ಪ್ರಕರಣಗಳಲ್ಲಿ ಆರ್ಬಿಐ ಹಾಗೂ ಬ್ಯಾಂಕ್‌ಗಳು ಸಕಾಲಿಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿತು.
ಈ ಪ್ರಕರಣದಲ್ಲಿ ಸರಣಿ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯ, ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಮಾಣಿತ ಕಾರ್ಯಾಚರಣಾ ವಿಧಾನ ಹಾಗೂ ದೂರಸಂಪರ್ಕ ಇಲಾಖೆಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿತು. ಇಂತಹ ಅಪರಾಧ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇನ್ನು ನಾಲ್ಕು ವಾರಗಳಲ್ಲಿ ಒಡಂಬಡಿಕೆ ಕರಡಿನೊಂದಿಗೆ ನ್ಯಾಯಾಲಯಕ್ಕೆ ಬರಬೇಕು ಎಂದು ನಿರ್ದೇಶನ ನೀಡಿತು.