×
Ad

ನ್ಯಾಯಾಂಗ ಭ್ರಷ್ಟಾಚಾರ ಕುರಿತ ಎನ್‌ಸಿಇಆರ್‌ಟಿ ಪುಸ್ತಕಕ್ಕೆ ಸುಪ್ರೀಂ ನಿಷೇಧ: ಕ್ಷಮೆ ಯಾಚಿಸಿದ ಸರ್ಕಾರ

Update: 2026-02-27 07:52 IST

PC: PTI

ಹೊಸದಿಲ್ಲಿ: ಭಾರತದ ನ್ಯಾಯಾಂಗ ಭ್ರಷ್ಟಾಚಾರ ಎಂಬ ಅಧ್ಯಾಯ ಒಳಗೊಂಡ ಎನ್‌ಸಿಇಆರ್‌ಟಿ ಸಿದ್ಧಪಡಿಸಿದ ಎಂಟನೇ ತರಗತಿ ಸಮಾಜ ವಿಜ್ಞಾನ ಪುಸ್ತಕವನ್ನು ಸುಪ್ರೀಂಕೋರ್ಟ್ ಗುರುವಾರ ನಿಷೇಧಿಸಿದೆ. ಯಾವುದೇ ರೀತಿಯಲ್ಲಿ ಇದರ ಪ್ರಸರಣವನ್ನು ನಿರ್ಬಂಧಿಸಲಾಗಿದೆ. ಜತೆಗೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬೇಷರತ್ ಕ್ಷಮೆ ಕೋರಿದ್ದರೂ, ಶಾಲಾ ಶಿಕ್ಷಣ ಕಾರ್ಯದರ್ಶಿ ಮತ್ತು ಎನ್‌ಸಿಇಆರ್‌ಟಿ ಅಧ್ಯಕ್ಷರ ವಿರುದ್ಧ ಏಕೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂಬ ಬಗ್ಗೆ ಶೋಕಾಸ್ ನೋಟಿಸ್ ನೀಡಿದೆ.

ಎರಡನೇ ದಿನದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಬ್ಬರು ಮಾಡಿದ "ಕ್ಷಮೆಗೆ ಅರ್ಹವಲ್ಲದ ಪ್ರಮಾದ"ಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದರು. ಜತೆಗೆ ಈ ಇಬ್ಬರನ್ನು ಯಾವುದೇ ಬಗೆಯ ಪಠ್ಯಪುಸ್ತಕ ರಚನೆಯಲ್ಲಿ ಪಾಲ್ಗೊಳ್ಳದಂತೆ ಕಾಯಂ ನಿಷೇಧ ವಿಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಆದರೆ ಈ ಹಂತದಲ್ಲಿ ಕ್ಷಮೆಯನ್ನು ಒಪ್ಪಿಕೊಳ್ಳಲು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಆದರೆ ಇದು ಸಂಸ್ಥೆಯ ಗೌರವವನ್ನು ಕೆಡಿಸಲು ಅಥವಾ ಘನತೆಗೆ ಧಕ್ಕೆ ತರಲು ನಡೆಸಿದ ಪ್ರಯತ್ನವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿತು. ಜತೆಗೆ ಪುಸ್ತಕದ ಹಾರ್ಡ್‌ಕಾಪಿ ಹಾಗೂ ಸಾಫ್ಟ್‌ಕಾಪಿ ಸೇರಿದಂತೆ ಎಲ್ಲವನ್ನೂ ಸಾರ್ವಜನಿಕರಿಗೆ ಲಭ್ಯವಾಗದಂತೆ ಕಿತ್ತುಹಾಕಬೇಕು ಎಂದು ಆದೇಶಿಸಿತು.

ಅವಿವೇಕದಿಂದ ಗುಂಡು ಹೊಡೆಯಲಾಗಿದ್ದು, ನ್ಯಾಯಾಂಗದ ರಕ್ತ ಸೋರಿಕೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಇಡೀ ಸಮಾಜಕ್ಕೆ ನ್ಯಾಯಾಂಗದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರಾಗಿ ಸಂಸ್ಥೆಯನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಸಿಜೆಐ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News