ಚುನಾವಣೆಯಲ್ಲಿ ʼಗ್ಯಾರಂಟಿʼ ಘೋಷಿಸಿ ಸಿದ್ದರಾಮಯ್ಯ ಗೆಲುವು ಪ್ರಶ್ನಿಸಿ ಅರ್ಜಿ: ಸುಪ್ರೀಂಕೋರ್ಟ್ ನಿಂದ ನೋಟಿಸ್ ಜಾರಿ
"ಪ್ರಣಾಳಿಕೆಯಲ್ಲಿನ ಘೋಷಣೆಗಳು ಹೇಗೆ ಭ್ರಷ್ಟಾಚಾರಕ್ಕೆ ಸಮವಾಗುತ್ತವೆ?" ಎಂದ ನ್ಯಾಯಾಲಯ
ಹೊಸದಿಲ್ಲಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉಚಿತ ಗ್ಯಾರಂಟಿ ಕೊಡುಗೆಗಳನ್ನು ಘೋಷಿಸಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವು ಸಾಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಸೋಮವಾರ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನ್ಯಾ. ವಿಕ್ರಂ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ವರುಣಾ ವಿಧಾನಸಭಾ ಕ್ಷೇತ್ರದ ಮತದಾರ ಶಂಕರ ಎಂಬವರು ಸಲ್ಲಿಸಿದ್ದ ಅರ್ಜಿಯ ಮೇಲ್ಮನವಿಯ ಕುರಿತು ಪೀಠವು ವಿಚಾರಣೆ ನಡೆಸುತ್ತಿತ್ತು.
ಆರಂಭದಲ್ಲಿ ಈ ಅರ್ಜಿಯನ್ನು ವಜಾಗೊಳಿಸಲು ನ್ಯಾಯಪೀಠ ಒಲವು ತೋರಿತಾದರೂ, ಎಸ್.ಸುಬ್ರಮಣಿಯನ್ ವರ್ಸಸ್ ತಮಿಳುನಾಡು ಸರಕಾರದ ಪ್ರಕರಣದಲ್ಲಿ ಚುನಾವಣಾ ಪೂರ್ವ ಆಶ್ವಾಸನೆಗಳು ಭ್ರಷ್ಟಾಚಾರಕ್ಕೆ ಸಮ ಎಂದು ಘೊಷಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಯು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಹಾಗೂ ನ್ಯಾ. ಎಂ.ಎಂ.ಸುಂದರೇಶ್ ನೇತೃತ್ವದ ಸಮನ್ವಯ ನ್ಯಾಯಪೀಠದ ಮುಂದೆ ಇತ್ಯರ್ಥಕ್ಕೆ ಭಾಕಿ ಇದೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು, ಇದೇ ಬಗೆಯ ಪ್ರಕರಣದಲ್ಲಿ ಸೋಮವಾರ ನೋಟಿಸ್ ಜಾರಿಗೊಳಿಸಿತು.
ಹೀಗಿದ್ದೂ, "ಪ್ರಣಾಳಿಕೆಯಲ್ಲಿನ ಘೋಷಣೆಗಳು ಹೇಗೆ ಭ್ರಷ್ಟಾಚಾರಕ್ಕೆ ಸಮವಾಗುತ್ತವೆ?" ಎಂದು ವಿಚಾರಣೆಯ ವೇಳೆ ನ್ಯಾ. ವಿಕ್ರಂ ನಾಥ್ ಪ್ರಶ್ನಿಸಿದರು.