ರೈತರ ಪ್ರತಿಭಟನೆ ಕುರಿತ ಪೋಸ್ಟ್ | ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂ ಕೋರ್ಟ್
ಹೊಸ ದಿಲ್ಲಿ: 2021ರಲ್ಲಿ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ನಟಿ, ಸಂಸದೆ ಕಂಗನಾ ರಣಾವತ್ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾ. ವಿಕ್ರಂ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಅರ್ಜಿದಾರರ ಹೇಳಿಕೆಯ ಬಗ್ಗೆ ನ್ಯಾ. ಮೆಹ್ತಾ ಅಸಮಾಧಾನ ವ್ಯಕ್ತಪಡಿಸಿದರು. “ನಿಮ್ಮ ಹೇಳಿಕೆಗಳ ಕುರಿತು ಏನು ಹೇಳುತ್ತೀರಿ? ಅದು ಕೇವಲ ರೀಟ್ವೀಟ್ ಮಾತ್ರವಲ್ಲ. ನೀವು ನಿಮ್ಮದೇ ಆದ ಹೇಳಿಕೆಗಳನ್ನು ಸೇರ್ಪಡೆ ಮಾಡಿದ್ದೀರಿ, ನೀವು ಮಸಾಲೆ ಮಿಶ್ರಣ ಮಾಡಿದ್ದೀರಿ” ಎಂದು ಅಭಿಪ್ರಾಯ ಪಟ್ಟರು.
ನನ್ನ ಕಕ್ಷಿದಾರರು ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಕಂಗನಾ ರಣಾವತ್ ಪರ ವಕೀಲರು ವಾದಿಸಿದರು. ಆ ಸ್ಪಷ್ಟೀಕರಣವನ್ನು ನೀವು ವಿಚಾರಣಾ ನ್ಯಾಯಾಲಯದೆದುರು ನೀಡಬಹುದು ಎಂದು ನ್ಯಾ. ಮೆಹ್ತಾ ಸೂಚಿಸಿದರು.
2021ರಲ್ಲಿ ನಡೆದಿದ್ದ ರೈತರ ಪ್ರತಿಭಟನೆಯ ಕುರಿತು ರೀಟ್ವೀಟ್ ಮಾಡಿದ್ದ ಕಂಗನಾ ರಣಾವತ್, “ಈ ಅಜ್ಜಿ ಟೈಮ್ ನಿಯತಕಾಲಿಕದಲ್ಲಿ ಕಾಣಿಸಿಕೊಂಡಿರುವ ಅದೇ ಬಲಿಷ್ಠ ಭಾರತೀಯಳಾಗಿದ್ದಾರೆ. ಇವರು 100ರೂ.ಗೆ ದೊರೆಯುತ್ತಾರೆ” ಎಂದು ಹಿರಿಯ ಪ್ರತಿಭಟನಾಕಾರರಾಗಿದ್ದ ಪ್ರತಿವಾದಿ ಮಹಿಂದರ್ ಕೌರ್ ವಿರುದ್ಧ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಮಹಿಂದರ್ ಕೌರ್ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.