ಮಾಜಿ ಮುಖ್ಯನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಆಯ್ಕೆ
ಸುಶೀಲಾ ಕರ್ಕಿ | PTI
ಕಾಠ್ಮಂಡು,ಸೆ.12: ನೇಪಾಳ ಅಧ್ಯಕ್ಷರ ಕಚೇರಿಯು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ದೇಶದ ಮಧ್ಯಂತರ ಪ್ರಧಾನಿಯನ್ನಾಗಿ ಶುಕ್ರವಾರ ರಾತ್ರಿ ಘೋಷಿಸುವ ಮೂಲಕ ಹಲವು ದಿನಗಳ ಊಹಾಪೋಹಗಳಿಗೆ ಅಂತ್ಯ ಹಾಡಿದೆ.
ಜೆನ್-ಝಡ್ ಪ್ರತಿಭನಾಕಾರರು, ಅಧ್ಯಕ್ಷ ರಾಮಚಂದ್ರ ಪೌದಲ್ ಮತ್ತು ಸೇನಾ ಮುಖ್ಯಸ್ಥ ಅಶೋಕ ರಾಜ್ ಸಿಗ್ದೇಲ್ ಅವರ ನಡುವೆ ಸಹಮತ ಮೂಡಿದ ಬಳಿಕ ಕರ್ಕಿಯವರನ್ನು ಪ್ರಧಾನಿಯಾಗಿ ನೇಮಕಗೊಳಿಸುವ ನಿರ್ಧಾರ ಹೊರಬಿದ್ದಿದೆ.
ಕರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದು, ಉಸ್ತುವಾರಿ ಸರಕಾರದಲ್ಲಿ ಸಣ್ಣ ಸಂಪುಟವನ್ನು ಹೊಂದಿರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕರ್ಕಿ ಶುಕ್ರವಾರ ರಾತ್ರಿಯೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದರ ಬೆನ್ನಲ್ಲೇ ಸಂಪುಟದ ಮೊದಲ ಸಭೆ ನಡೆಯಲಿದೆ ಎಂದೂ ಮೂಲಗಳು ಹೇಳಿವೆ. ಫೆಡರಲ್ ಸಂಸತ್ತಿನ ಜೊತೆಗೆ ಎಲ್ಲ ಏಳೂ ಪ್ರಾಂತೀಯ ಸಂಸತ್ತುಗಳ ವಿಸರ್ಜನೆಗೆ ಸಂಪುಟವು ಶಿಫಾರಸು ಮಾಡುವ ಸಾಧ್ಯತೆಯಿದೆ.
ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ನಿಷೇಧವನ್ನು ವಿರೋಧಿಸಿ ಮೂರು ದಿನಗಳ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಬುಧವಾರ ಮುಂದಿನ ಚುನಾವಣೆಯವರೆಗೆ ಉಸ್ತುವಾರಿ ಸರಕಾರದ ಮುಖ್ಯಸ್ಥರಾಗಿ ಕರ್ಕಿಯವರ ಹೆಸರು ಮುಂಚೂಣಿಗೆ ಬರುವುದರೊಂದಿಗೆ ಜೆನ್-ಝಡ್ ಪ್ರತಿಭಟನಾಕಾರರ ನಡುವೆ ಸಹಮತ ಮೂಡಿದ್ದಂತೆ ಕಂಡು ಬಂದಿತ್ತು.
ಆದರೆ, ಗುರುವಾರ ಪ್ರತಿಭಟನಾಕಾರರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಮತ್ತು ಮಧ್ಯಂತರ ಪ್ರಧಾನಿಯಾಗಿ ಕುಲ್ಮನ್ ಘೀಸಿಂಗ್ ಅವರ ಹೆಸರು ಮುನ್ನೆಲೆಗೆ ಬಂದಿದೆ ಎಂದು ವರದಿಗಳು ಸೂಚಿಸಿದ್ದವು.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಘೀಸಿಂಗ್ ನೇಪಾಳದ ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸುವ ಮೂಲಕ ಹೆಸರಾಗಿದ್ದಾರೆ.
ಕಾಠ್ಮಂಡು ಮೇಯರ್, ಬಾಲೆನ್ ಎಂದೇ ಹೆಚ್ಚು ಪರಿಚಿತರಾಗಿರುವ 35ರ ಹರೆಯದ ರ್ಯಾಪರ್ ಮತ್ತು ರಾಜಕಾರಣಿ ಬಾಲೇಂದ್ರ ಶಾ ಕೂಡ ಮಧ್ಯಂತರ ಪ್ರಧಾನಿ ಹುದ್ದೆಗೆ ಪ್ರಮುಖ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.
ಪ್ರತಿಭಟನಾಕಾರರಲ್ಲಿ ಜನಪ್ರಿಯರಾಗಿರುವ ಶಾ ಮಧ್ಯಂತರ ಪ್ರಧಾನಿ ಹುದ್ದೆಯ ಬಗ್ಗೆ ಉತ್ಸುಕತೆ ಹೊಂದಿರಲಿಲ್ಲ,ಆದರೆ ಅವರೂ ಕರ್ಕಿಯವರ ಹೆಸರನ್ನು ಅನುಮೋದಿಸಿದ್ದರು.
ನೇಪಾಳದ ಮೊದಲ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕರ್ಕಿ 2016 ಮತ್ತು 2017ರಲ್ಲಿ ಹುದ್ದೆಯಲ್ಲಿದ್ದರು. ನ್ಯಾಯಾಧೀಶರಾಗಿ ತನ್ನ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ತನ್ನ ಕಠಿಣ ನಿಲುವಿನಿಂದಾಗಿ ಕರ್ಕಿ ಯುವ ಜೆನ್-ಝಡ್ ಪ್ರತಿಭಟನಾಕಾರರ ನಡುವೆ ಜನಪ್ರಿಯರಾಗಿದ್ದಾರೆ.
ಬನಾರಸ್ ಹಿಂದು ವಿವಿಯಲ್ಲಿ ವ್ಯಾಸಂಗ ಮಾಡಿರುವ ಕರ್ಕಿ, ಭಾರತೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತವು ನೇಪಾಳಕ್ಕೆ ಬಹಳಷ್ಟು ನೆರವಾಗಿದೆ ಎಂದು ಹೇಳಿದ್ದಾರೆ.