ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ
ಕೊಲ್ಕತ್ತಾ: ಕಲ್ಲಿದ್ದಲು ಹಗರಣಕ್ಕೆ ಸಂಬಂಧ ಕಲ್ಪಿಸಿ ತಮ್ಮ ವಿರುದ್ಧ ಆರೋಪ ಹೊರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ಪರಿಹಾರ ಕೋರಿ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
"ಮೊದಲು ಮಮತಾ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದೆ, ಆದರೆ ಅವರು ಉತ್ತರ ನೀಡದ ಕಾರಣ ಅಲಿಪುರ್ ನ್ಯಾಯಾಲಯದಲ್ಲಿ ಈ ಕುರಿತು ಮೊಕದ್ದಮೆ ದಾಖಲಿಸಿದ್ದೇನೆ" ಎಂದು ಸುವೇಂದು ಅಧಿಕಾರಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಕಲ್ಲಿದ್ದಲು ಹಗರಣದಲ್ಲಿ ನನ್ನ ಪಾತ್ರವಿದೆ ಎಂಬ ನಿಮ್ಮ ಕಾಲ್ಪನಿಕ ಆರೋಪಗಳಿಗೆ ಸಂಬಂಧಿಸಿದ ಮಾನನಷ್ಟ ನೋಟಿಸ್‌ಗೆ ನೀವು ಉತ್ತರ ನೀಡದೆ ಮೌನವಹಿಸಿರುವುದರಿಂದ ನಿಮಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ನಿಮ್ಮ ದುಸ್ಸಾಹಸಕ್ಕಾಗಿ ನಿಮ್ಮನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವ ನನ್ನ ಮಾತನ್ನು ನಾನು ಉಳಿಸಿಕೊಂಡಿದ್ದೇನೆ. ಇಂದು ನಿಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೇನೆ. ನೀವು ನಿಮ್ಮ ವಕೀಲರನ್ನು ಬೇಗ ಸಂಪರ್ಕಿಸಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕಾಗುತ್ತದೆ. ನಾನು ಅದನ್ನು ದೇಣಿಗೆಯಾಗಿ ನೀಡುತ್ತೇನೆ" ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ತಮ್ಮ ಮೇಲೆ ಆರೋಪ ಹೊರಿಸಿದ ಮಮತಾ ಬ್ಯಾನರ್ಜಿಗೆ ತಮ್ಮ ವಕೀಲರ ಮೂಲಕ ಸುವೇಂದು ಅಧಿಕಾರಿ ಈ ಮೊದಲು ನೋಟಿಸ್ ಕಳುಹಿಸಿದ್ದರು.