ಮೈಸೂರ್ ಪಾಕ್ ಅನ್ನು ಮೈಸೂರ್ ಶ್ರೀ ಮಾಡಿದ ಜೈಪುರ ಸಿಹಿ ತಿಂಡಿ ವ್ಯಾಪಾರಿಗಳು!
ಹೊಸದಿಲ್ಲಿ: ಜೈಪುರದ ಅನೇಕ ಮಿಠಾಯಿ ಅಂಗಡಿಗಳು ಈಗ ಮೋತಿ ಪಾಕ್, ಗೊಂಡ್ ಪಾಕ್, ಮೈಸೂರು ಪಾಕ್ ಮುಂತಾದ ಹೆಸರುಗಳನ್ನು ಬದಲಾಯಿಸುತ್ತಿವೆ. 'ಆಪರೇಷನ್ ಸಿಂದೂರ್' ಬಳಿಕ ಈ ಪ್ರಕ್ರಿಯೆ ಜೈಪುರದಲ್ಲಿ ಆರಂಭವಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಹೇಳಿದೆ.
ಬೇರೆ ಬೇರೆ ಪತ್ರಿಕೆಗಳ ಪ್ರಕಾರ ವಿವಿಧ ಮಿಠಾಯಿ ಅಂಗಡಿಗಳಲ್ಲಿ ಈಗ ಪಾಕ್ ಪದವನ್ನು ತೆಗೆದು 'ಶ್ರೀ' ಪದವನ್ನು ಹಾಕಲಾಗುತ್ತಿದೆ. ಉದಾಹರಣೆಗೆ, ಮೊತಿ ಪಾಕ್ ಈಗ ಮೊತಿ ಶ್ರೀ, ಆಮ್ ಪಾಕ್ ಈಗ ಆಮ್ ಶ್ರೀ, ಗೊಂದ್ ಪಾಕ್ ಗೊಂದ್ ಶ್ರೀ, ಮೈಸೂರು ಪಾಕ್ ಇನ್ನು ಮುಂದೆ ಮೈಸೂರ ಶ್ರೀ. ಸ್ವರ್ಣ ಭಸ್ಮ ಪಾಕ್ ಕೂಡ ಸ್ವರ್ಣ ಭಸ್ಮ ಶ್ರೀ ಆಗಿದೆ.
ಆದರೆ, ನೀವು ಯಾವುದೇ ಹೆಸರು ಇಟ್ಟರೂ ಮಿಠಾಯಿ ಮಿಠಾಯಿಯೇ ಆಗಿರುತ್ತದೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ನಂತರ ಅನೇಕ ಅಂಗಡಿಗಳ ಮಾಲಕರು ಪಾಕ್ ಪದವನ್ನು ತೆಗೆದುಹಾಕುತ್ತಿದ್ದಾರೆ. ಇದು ಇತರ ನಗರಗಳಿಗೂ ಹರಡಬಹುದು. ಉದಾಹರಣೆಗೆ, ಕರಾಚಿ ಬೇಕರಿ ಮೇಲೆ ದಾಳಿ ನಡೆದಿತ್ತು. ಅದಕ್ಕೂ ಪಾಕಿಸ್ತಾನದ ಕರಾಚಿಗೂ ಸಂಬಂಧವಿಲ್ಲ. ಅದರ ಮಾಲಕರು ರಾಜೇಶ್ ರಾಮ್ನಾನಿ ಹಾಗು ಹರೀಶ್ ರಾಮ್ನಾನಿ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ತೋರುವ ಯಾವುದೇ ಹೆಸರುಗಳನ್ನು ಮರುಪರಿಶೀಲಿಸಲಾಗುತ್ತಿದೆ.
ರಾಜಸ್ಥಾನದಲ್ಲಿ ಅನೇಕ ಪ್ರಸಿದ್ಧ ಮಿಠಾಯಿಗಳು ಇವೆ. ಉದಾಹರಣೆಗೆ, ಜುಂಜುನೂ ಪೇಡಾ ಅಥವಾ ಜೈಪುರ ಮಿಠಾಯಿಗಳು. ಬಿಕಾನೇರ್ ಮೋತಿ ಪಾಕ್ ಈಗ ಬಿಕಾನೇರಿ ಮೊತಿ ಶ್ರೀ, ಚಾಂದಿ ಭಸ್ಮ ಪಾಕ್ ಈಗ ಚಾಂದಿ ಭಸ್ಮ ಶ್ರೀ, ಸ್ವರ್ಣ ಭಸ್ಮ ಪಾಕ್ ಸ್ವರ್ಣ ಭಸ್ಮ ಶ್ರೀ ಆಗಿದೆ. ಮಿಠಾಯಿಗಳಲ್ಲಿ ದೇಶಭಕ್ತಿ ಮೂಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಪಾಕ್ ಅಥವಾ ಶ್ರೀ ಎಂದು ಯಾವ ಹೆಸರಿನಿಂದ ಕರೆಯಿದರೂ, ಅದರ ರುಚಿ ಹಾಗೆಯೇ ಇರುತ್ತದೆ.
►ಮೈಸೂರ್ ʼಪಾಕ್ʼ ಹುಟ್ಟಿದ್ದೇಗೆ?
ಇಲ್ಲಿ ʼಪಾಕ್ʼ ಪದದ ಮೂಲವನ್ನು ತಿಳಿದುಕೊಳ್ಳುವುದು ಮುಖ್ಯ. ಮೈಸೂರು ಪಾಕ್ ಒಂದು ಐತಿಹಾಸಿಕ ಮತ್ತು ಪ್ರಸಿದ್ಧ ಮಿಠಾಯಿ.1935ರಲ್ಲಿ, ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ, ಅರಮನೆಯ ಅಂಬಾ ವಿಲಾಸ್ ಪ್ಯಾಲೆಸ್ ನ ಅಡುಗೆ ಮನೆಗೆ ಹೊಸ ಸಿಹಿ ತಿಂಡಿ ಬೇಕೆಂದು ಹೇಳಲಾಗಿತ್ತು.
ಅಲ್ಲಿ 'ಮಾದಪ್ಪಾ' ಎಂಬವರು ತುಪ್ಪ, ಕಡಲೆ ಹಿಟ್ಟು, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಒಂದು ಸಿಹಿ ತಯಾರಿಸಿದರು. ಮಹಾರಾಜ ಊಟ ಮುಗಿಸುವಾಗ, ಅದು ಗಟ್ಟಿಯಾಗಿತ್ತು. ಅವರಿಗೆ ಅದು ತುಂಬಾ ಇಷ್ಟವಾಯಿತು ಮತ್ತು ಅದಕ್ಕೆ 'ಮೈಸೂರು ಪಾಕ್' ಎಂದು ಹೆಸರು ಇಡಲಾಯಿತು!
ಕನ್ನಡ ಭಾಷೆಯಲ್ಲಿ 'ಪಾಕ' ಎಂದರೆ 'ಸಿಹಿ ಪಾನಕ' ಅಥವಾ ಬೆಲ್ಲ, ಸಕ್ಕರೆಯನ್ನು ನೀರಿನೊಂದಿಗೆ ಕುದಿಸಿ ತಯಾರಿಸಿದ ಮಂದವಾದ ದ್ರವ. ಮೈಸೂರು ಪಾಕ್ ಎಂದರೆ ಮೈಸೂರಿನ ಸಿಹಿ.
ಪಾಕ್ ಪದದ ಮೂಲ ಫಾರ್ಸಿಯಲ್ಲಿದೆ, ಆದರೆ ಸಂಸ್ಕೃತದಲ್ಲಿಯೂ ಇದೆ. ಅದರರ್ಥ: ಸರಿಯಾಗಿ ಬೇಯಿಸುವುದು, ಶುದ್ಧ, ಪವಿತ್ರ, ಅಡುಗೆ ಪ್ರಕ್ರಿಯೆ. 'ರೇಖ್ತಾ' ಶಬ್ದಕೋಶದ ಪ್ರಕಾರ ಹಿಂದಿಯಲ್ಲಿಯೂ ಪಾಕ್ ಎಂದರೆ 'ಪಕಾನಾ' ಅಂದ್ರೆ (ಬೇಯಿಸುವುದು), ಅಥವಾ 'ಪಾವನ' ಎಂದರ್ಥ.
ಭಾಷೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಆದ್ದರಿಂದ, 'ಪಾಕ್' ಎಂಬ ಪದವನ್ನು ಸಂಸ್ಕೃತದಲ್ಲಿಯೂ ಉಲ್ಲೇಖಿಸಲಾಗಿದೆ. ಅದರ ಅರ್ಥ: 'ಯಾವುದೇ ತಿನಿಸಿನ ಸರಿಯಾಗಿ ಬೇಯಿಸಿದ ಆವೃತ್ತಿ', 'ಅಡುಗೆ ಮಾಡುವ ವಿಧಾನ', ಮತ್ತು 'ಆಹಾರವನ್ನು ಬೇಯಿಸುವ ಪ್ರಕ್ರಿಯೆ' ಎಂಬಿತ್ಯಾದಿ ಅರ್ಥಗಳಿವೆ.
'ವಿಕ್ಷನರಿ' ಎಂಬ ಶಬ್ದಕೋಶದ ಪ್ರಕಾರ 'ಪಾಕ್' ಪದದ ಅರ್ಥ 'ಅಡುಗೆ ಮಾಡುವುದು' ಅಥವಾ 'ಶುದ್ಧ' ಎಂಬ ಅರ್ಥಗಳಿವೆ. ಸರಳ ಭಾಷೆಯಲ್ಲಿ 'ಪಾಕ' ಎಂದರೆ 'ಶುದ್ಧತೆ'ಯನ್ನು ಸೂಚಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ, ಕ್ರಿಯಾಪದ ದಲ್ಲಿ ಇದನ್ನು 'ಅಡುಗೆ ಮಾಡು'ವಲ್ಲಿ ಉಪಯೋಗಿಸಲಾಗುತ್ತದೆ.
ಸಿಹಿ ತಿಂಡಿಗೆ ಸಕ್ಕರೆ, ಕಲ್ಲುಸಕ್ಕರೆ ಅಥವಾ ಬೆಲ್ಲದ ಸಿರಪ್ ಸೇರಿಸಿ ತಯಾರಿಸಿದರೆ ಅದನ್ನು 'ಪಾಕ್' ಎಂದು ಕರೆಯುತ್ತಾರೆ. ಆ ಸಿರಪ್ ಗಳನ್ನು ಸಿಹಿತಿಂಡಿಗಳಲ್ಲಿ ಸೇರಿಸಿದರೆ ಅದನ್ನು 'ಪಾಕ' ಎಂದು ಕರೆಯುತ್ತೇವೆ. ಆದ್ದರಿಂದ ಮೈಸೂರು ಪಾಕ್, ಗೊಂದ್ ಪಾಕ್, ಗಾಜರ್ ಪಾಕ್ ಎಂಬ ಹೆಸರುಗಳು ಬಂದವು.
ಆದರೆ ಈ ಸಿಹಿತಿಂಡಿಯ ಪಾಕ್ ಪದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಭಾಷೆಯಲ್ಲಿ ಅದರ ಅರ್ಥ ಬೇರೆ. ಯಾರಿಗೆ ಯಾವ ಹೆಸರು ಇಡಬೇಕು ಅನ್ನಿಸುತ್ತದೋ ಅವರು ಇಟ್ಟುಕೊಳ್ಳಬಹುದು. ಆದರೆ, ಸಿಹಿತಿಂಡಿ ಸಿಹಿತಿಂಡಿಯಾಗಿಯೇ ಉಳಿಯುತ್ತದೆ, ತಿನ್ನುವವರು ತಿನ್ನುತ್ತಾರೆ!!